ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 17 : ತಾಲ್ಲೂಕಿನ ನಂದಗುಡಿ ಹೋಬಳಿಯ ಮಾರಸಂಡಹಳ್ಳಿ ಗ್ರಾಮದ ಸಣ್ಣ ರೈತರ ಜಮೀನುಗಳ ಮೇಲೆ ರಿಯಲ್ ಎಸ್ಟೇಟ್ ದಂದೆಕೋರರ ಕಣ್ಣು ಬಿದ್ದಿದೆ. ಕಳೆದ 40- 50 ವರ್ಷಗಳಿಂದ ಇದೇ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಆದರೆ ಕೆಲವರು ಈ ಜಾಗವನ್ನು ಕಬಳಿಸಲು ಬಂದಿದ್ದಾರೆ. ನಮ್ಮ ಜಮೀನಿನ ತಂಟೆಗೆ ಬಂದರೆ ನಾವು ಈ ಜಮೀನುಗಳಲ್ಲೇ ನೇಣು ಬಿಗಿದುಕೊಂಡು ಸಾಯುತ್ತೇವೆ ಎಂದು ಮಾರಸಂಡಹಳ್ಳಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದಾರೆ.
ಹೊಸಕೋಟೆ ನಂದಗುಡಿ ಹೋಬಳಿಯ ಗಡಿ ಭಾಗದಲ್ಲಿರುವ ಮಾರಸಂಡಹಳ್ಳಿ ಹಾಗೂ ದೊಡ್ಡರಾಮನಹಳ್ಳಿ ಗಡಿ ಭಾಗದ ಸರ್ವೇ ನಂ.2 ರ ಜಮೀನಿನಲ್ಲಿ ಮಾರಸಂಡಹಳ್ಳಿ ಗ್ರಾಮದರೈತ ಚಂದ್ರೇಗೌಡ ಮಾತನಾಡಿ, ಸರ್ವೇ ನಂ.2ರ ಜಮೀನಿನಲ್ಲಿ 121 ಎಕರೆ ಜಮೀನಿನಲ್ಲಿ ಕಲ್ಲು ಬಂಡೆಗಳಿದ್ದು, ಅದರಲ್ಲಿ 30 ಎಕರೆ ವ್ಯವಸಾಯಕ್ಕೆ ಯೋಗ್ಯವಾಗಿದ್ದು ಆ ಜಮೀನುಗಳಲ್ಲಿ ಕಳೆದ 40 ವರ್ಷಗಳಿಂದ ರಾಗಿ, ಜೋಳ, ಹುರಳಿ ಸೇರಿದಂತೆ ಸಣ್ಣ ಸಣ್ಣ ಬೆಳೆಗಳನ್ನು ಬೆಳೆದು ಜೀವನ ಮಾಡುತ್ತಿದ್ದೇವೆ. ಆದರೆ ಈಗ ರಿಯಲ್ ಎಸ್ಟೇಟ್ ದಂಧೆಕೋರರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಲ್ಲಿ ಕುಂಟೆ, ಕೆರೆ ಇದ್ದರೂ ಸಹ ಕೈ ಬರವಣಿಗೆಯಲ್ಲಿ ಸಾಗುವಳಿ ಸ್ಕೆಚ್ ಮಾಡಿಸಿ ಸಾಗುವಳಿ
ಚೀಟಿಗಳನ್ನು ಪಡೆದು ನಿಜವಾದ ರೈತರಿಗೆ ಸಾಗುವಳಿ ಚೀಟಿ ಕೊಡದೆ ರಿಯಲ್ ಎಸ್ಟೇಟ್ ಮಾಡುವ ದಂಧೆಕೋರರಿಗೆ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಯಾವುದೇ ಕಾರಣಕ್ಕೆ ಈ ಜಾಗವನ್ನು ಬಿಡುವುದಿಲ್ಲ ನಮಗೆನಾದರು ತೊಂದರೆ ಕೊಟ್ಟರೆ ನಾವು ಇಲ್ಲೇ ಸಾಯುತ್ತೇವೆ ಎಂದು ಆಕ್ರೋಶವ್ಯಕ್ತ ಪಡಿಸಿದ್ದಾರೆ ರೈತರಾದ ಬೈರೇಗೌಡ , ನಂಜೇಗೌಡ ಹಾಗೂ ವೆಂಕಟೇಶ್, ಮುನಿಯಪ್ಪ.
ಬಳಿಕ ಮಾತನಾಡಿದ ರೈತರು, ಈ ಜಾಗ ಬೇಚಾರ ಗ್ರಾಮದ ಸರ್ವೆ ನಂ ಆಗಿದ್ದು ಇಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಕಳೆದ ಸುಮಾರು ವರ್ಷಗಳಿಂದ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲನೆ ಮಾಡಿ ಹಕ್ಕು ಪತ್ರ ದಾಖಲೆಗಳನ್ನು ನೀಡುತ್ತೇವೆ ಎಂದು ಹೇಳಿ ಹೋದರು. ಆದರೆ. ನಾವು ಅನೇಕ ಬಾರಿ ಅಧಿಕಾರಿಗಳ ಕಛೇರಿಗಳಿಗೆ ಅಲೆದಾಡಿದರು ನಮಗೆ ದಾಖಲೆ ಪತ್ರಗಳನ್ನು ನೀಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ದಂಧೆಕೋರರು ನಮಗೆ ತೊಂದರೆ ಕೊಡಲು ಬರುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ನಿಜವಾದ ರೈತರನ್ನು ಗುರುತಿಸಿ ನಮಗೆ ಹಕ್ಕು ಪತ್ರ, ದಾಖಲೆ ಪತ್ರಗಳನ್ನು ನೀಡಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅರ್ಜಿದಾರರು ಹಾಗು ಜಮೀನು ಮಾಲೀಕರಾದ, ಮಂಜುಳಾ ಚಂದ್ರೇಗೌಡ, ಬೈರೇಗೌಡ, ಚನ್ನಕೃಷ್ಣ, ಮುನಿಯಪ್ಪ, ನಂಜೇಗೌಡ ನಾರಾಯಣಸ್ವಾಮಿ, ಚಿಕ್ಕೀರಪ್ಪ, ಬಿನ್ ಚಿಕ್ಕಪ್ಪಯ್ಯ, ವೆಂಕಟೇಶ್ ಸೇರಿದಂತೆ ಗ್ರಾಮಸ್ಥರಿದ್ದರು.