ಮೈಸೂರು, ಆ.16: ತಮಿಳುನಾಡಿಗೆ ರಾಜ್ಯದಿಂದ ಕಾವೇರಿ ನೀರನ್ನು ಬಿಡುಗಡೆ ಮಾಡುವ ವಿಚಾರದ ಬಗ್ಗೆ ರಾಜ್ಯದಲ್ಲಿ ಕೇವಲ ಹೇಳಿಕೆ, ಸ್ಪಷ್ಟನೆ, ಪ್ರತಿ ಹೇಳಿಕೆ ನೀಡಲಾಗುತ್ತಿದೆ ಹೊರತು ರೈತರ ಪರ ಏನೇನು ಆಗುತ್ತಿಲ್ಲ. ಬದಲಿಗೆ ಕಬಿನಿ ಮತ್ತು ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ.
ತಮಿಳುನಾಡು ಸರ್ಕಾರ ದೆಹಲಿಯಲ್ಲಿ ಹೋರಾಟ ಮಾಡುತ್ತಾ ಕರ್ನಾಟಕದಲ್ಲಿ ಮಳೆ ಇಲ್ಲದೇ ನೀರಿನ ಕೊರತೆ ಉಂಟಾಗಿರುವುದನ್ನು ಲೆಕ್ಕಿಸದೇ ತಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯ ಹಾದಿ ತುಳಿದಿದೆ.
ಆದರೆ, ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳು ಹೇಳಿಕೆ- ಪ್ರತಿ ಹೇಳಿಕೆಗೆ ಮಾತ್ರ ತಮ್ಮ ಹೋರಾಟವನ್ನು ಸೀಮಿತ ಮಾಡಿಕೊಂಡಿದ್ದಾರೆ ಹೊರತು ದೆಹಲಿಯಲ್ಲಿ ಕಾನೂನಿನಡಿಯಲ್ಲಿ ಹೋರಾಟ ಮಾಡುತ್ತಿಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ರೈತ ಮುಖಂಡ ದರಸಗುಪ್ಪೆ ಮಹೇಶ್ ಕುಮಾರ್ ಎಂದು ಆಗ್ರಹಪಡಿಸಿದ್ದಾರೆ.
ಗೌಡರ ಪ್ರವೇಶ ಆಗಬೇಕು:
ಇದೇ 2019 ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕಾವೇರಿ ಸಮಸ್ಯೆ ಎದುರಾಯಿತು. ಆಗ ರಾಜ್ಯದ ನೀರು ಮತ್ತು ನೀರಾವರಿ ವಿಚಾರಗಳನ್ನು ಬೆರಳ ತುದಿಯಲ್ಲೇ ಇಟ್ಟುಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೆಲಿಕ್ಯಾಪ್ಟರ್ನಲ್ಲಿ ಕೆಆರ್ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ, ನಂತರ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ರಾಜ್ಯದ ವಕೀಲರು, ಅಧಿಕಾರಿಗಳಿಗೆ ತಮ್ಮ ಕಾನೂನಿನ ನಡೆ ಹೇಗಿರಬೇಕಾಗುತ್ತದೆ? ಎಂಬುದನ್ನು ವಿವರಿಸಿದ್ದಲ್ಲದೇ, ಮಂಡ್ಯ ಜನರ ಆಕ್ರೋಶವನ್ನು ತಣ್ಣಾಗಾಗಿಸುವಲ್ಲಿ ಯಶಸ್ವಿಯಾಗಿದ್ದರು.
2023ರಲ್ಲೂ ಕಾವೇರಿ ನೀರಿನ ಸಮಸ್ಯೆ ಉದ್ಭವವಾಗಿದೆ. ಕೂಡಲೇ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ, ರಾಜ್ಯದ ರೈತರ ಹಿತರಕ್ಷಣೆಗೆ ಮುಂದಾಗುವ ಮೂಲಕ ತಮ್ಮ ತೆಕ್ಕೆಗೆ ಅಂಟಿಕೊಂಡಿರುವ ಮಣ್ಣಿನ ಮಗ ಎಂಬ ವಿಶೇಷಣಕ್ಕೆ ತಕ್ಕಂತೆ ನಡೆದುಕೊಳ್ಳುವುದು ಇಂದಿನ ತುರ್ತಾಗಿದೆ. ದೆಹಲಿಯಲ್ಲಿ ಗೌಡರ ಪ್ರಭಾವ ಇದ್ದು, ಅದು ರಾಜ್ಯ ರೈತರಿಗೆ ಉಪಯೋಗ ಆಗಲೇಬೇಕಾಗಿದೆ.
ದಿನೇ ದಿನೇ ಹೆಚ್ಚು ಹರಿಯುತಿಹಳು ಕಾವೇರಿ
ಈ ಮಧ್ಯೆ ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳಿಂದ ತಮಿಳುನಾಡಿಗೆ ಬಿಡುಗಡೆಯಾಗುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದಾರೆ.
ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ , ಸೋಮವಾರ 5,243 ಕ್ಯೂಸೆಕ್ ,ಮಂಗಳವಾರ 8,590 ಕ್ಯೂಸೆಕ್ ನೀರು ಹಾಗೂ ಬುಧವಾರ 11,602 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ.
ಕೆಆರ್ಎಸ್ನಿಂದ ರಾಜ್ಯಕ್ಕೆ ನೀರು ಬಿಡುಗಡೆಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ದಿನೇ ದಿನೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕಬಿನಿಯಿಂದ ಈಗ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್, ಹಾರಂಗಿಯಿಂದ 1745 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯಗಳಿಂದ ಮಳೆ ಇಲ್ಲದೇ ಅತ್ಯಂತ ಕಡಿಮೆ ಪ್ರಮಾಣದ ನೀರು ಬರುತ್ತಿರುವ ಪರಿಸ್ಥಿತಿಯಲ್ಲಿ ಹೆಚ್ಚಿನ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 111.08 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಂಗ್ರಹ – 32.820 ಟಿಎಂಸಿ
ಒಳಹರಿವು – 3,078 ಕ್ಯೂಸೆಕ್
ಹೊರಹರಿವು – 11,602 ಕ್ಯೂಸೆಕ್
ಕಬಿನಿ
ಗರಿಷ್ಠ ಮಟ್ಟ-2284 ಅಡಿಗಳು
ಇಂದಿನ ಮಟ್ಟ-2280.29.
ಸಂಗ್ರಹ ಸಾಮರ್ಥ್ಯ-19.52 ಟಿಎಂಸಿ
ಇಂದಿನ ಸಂಗ್ರಹ-17.21
ಒಳ ಹರಿವು-2022 ಕ್ಯೂಸೆಕ್
ಹೊರಹರಿವು-5000 ಕ್ಯೂಸೆಕ್
ಹೇಮಾವತಿ
ಗರಿಷ್ಠ ಮಟ್ಟ-2922 ಅಡಿಗಳು
ಇಂದಿನ ಮಟ್ಟ-2915.02
ಸಂಗ್ರಹ ಸಾಮರ್ಥ್ಯ-37.107 ಟಿಎಂಸಿ
ಇಂದಿನ ಸಂಗ್ರಹ-30.704 ಟಿಎಂಸಿ
ಒಳ ಹರಿವು-1184 ಕ್ಯೂಸೆಕ್
ಹೊರ ಹರಿವು-5360 ಕ್ಯೂಸೆಕ್