ಸುದ್ದಿಮೂಲ ವಾರ್ತೆ
ಕೊಪ್ಪಳ, ಮೇ.16: ಭಾರತ ಕೃಷಿ ಪ್ರಧಾನ ರಾಷ್ಟ್ರ, ಕೃಷಿಯನ್ನು ನಂಬಿರುವ ರೈತರು ಭೂಮಿಯಲ್ಲಿ ಬೆಳೆಯನ್ನು ಬಿತ್ತನೆ ಮಾಡುವ ಮುನ್ನ ಹಲವಾರು ಸಂಪ್ರಾದಾಯಿಕ ಪದ್ದತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಅದರಲ್ಲಿಯೂ ಮುಂಗಾರು ಹಂಗಾಮಿನ ಮುನ್ನ ರೈತರು ದೇವರಿಗೆ ಮೊರೆ ಹೋಗುವುದು ವಾಡಿಕೆ. ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆಯ ಪೂಜೆ ಸಲ್ಲಿಸುವುದು ವಾಡಿಕೆ. ಆ ನಂತರ ಕೃಷಿ ಭೂಮಿಯಲ್ಲಿ ಭೂಮಿಗೆ ಹಾಲೆರೆಯುವ ಪದ್ದತಿ ಇದೆ.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಂಗಾರು ಬಿತ್ತನೆಯ ಮುನ್ನ ವಿಶಿಷ್ಠ ಆಚರಣೆಯೊಂದು ಇದೆ. ಈ ಗ್ರಾಮದಲ್ಲಿ ತಮ್ಮ ಗ್ರಾಮದ ಸೀಮಾಂತರದ ಸುತ್ತಲು ಹಾಲೆರೆಯುವ ಪದ್ದತಿ ಇದೆ. ಸಂಪ್ರದಾಯ ಬದ್ದವಾಗಿ ಇಡೀ ಗ್ರಾಮಸ್ಥರು ಮುದ್ದಾಬಳ್ಳಿಯ ಸೀಮೆಯ ಮೇರಿಯ ಸುತ್ತಲು ಭಾಜಾ ಭಜಂತ್ರಿಯೊಂದಿಗೆ ಗಡಗಿಯಲ್ಲಿ ತುಂಬಿಕೊಂಡಿರುವ ಹಾಲನ್ನು ಭೂಮಿಗೆ ಏರಿಯುತ್ತಾರೆ. ಈ ದಿನದ ಮುದ್ದಾಬಳ್ಳಿಯಲ್ಲಿ ಸಂಭ್ರಮವಿರುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೂನ ತಿಂಗಳ ಆರಂಭದಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಮಾಡುತ್ತಾರೆ. ಮುಂಗಾರು ಮಳೆಗಳು ಸುರಿಯುವ ಮುನ್ನ ಕೃಷಿ ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು ವರ್ಷ ಪೂರ್ತಿ ಅನ್ನ, ಆರ್ಥಿಕತೆ ನೀಡುವ ಬೆಳೆಯನ್ನು ಬೆಳೆಯಲು ಬಿತ್ತನೆ ಮಾಡುತ್ತಾರೆ.
ಭೂಮಿಗೆ ಬೀಜಗಳನ್ನು ಹಾಕಿ, ಈ ಬೀಜವು ಕಾಳು ನೀಡಿ ತಮ್ಮ ವರ್ಷ ಬದುಕು ಹಸನವಾಗಲಿ ಎಂಬ ಕಾರಣಕ್ಕೆ ರೈತರು ಬಿತ್ತನೆಯ ಮುನ್ನ ದೇವರಿಗೆ ಮೊರೆ ಹೋಗುತ್ತಾರೆ. ಪ್ರತಿ ಗ್ರಾಮದಲ್ಲಿ ದ್ಯಾಮವ್ವ ಅಥವಾ ದುರ್ಗಮ್ಮ ದೇವತೆಯನ್ನು ಗ್ರಾಮ ದೇವತೆ ಎಂದು ಪೂಜೆ ಮಾಡುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಿದರೆ ಮುಂದಿನ ನಮ್ಮ ಬದುಕು ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.
ಇದೇ ಕಾರಣಕ್ಕೆ ಮುಂಗಾರು ಹಂಗಾಮಿನ ಮುನ್ನ ಪ್ರತಿ ಗ್ರಾಮದಲ್ಲಿ ಗ್ರಾಮ ದೇವಿಯನ್ನು ಆರಾಧಿಸುವ ಹಿನ್ನೆಲೆಯಲ್ಲಿ ಮಂಗಳವಾರ, ಶುಕ್ರವಾರ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಕೃಷಿ ಕಾರ್ಯಕ್ಕೆ ರಜೆ ನೀಡಿ ಅಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಐದನೆಯ ವಾರದಂದು ಗ್ರಾಮಸ್ಥರೆಲ್ಲರೂ ದೇವಿಗೆ ಉಡಿ ತುಂಬುವ ಕಾರ್ಯ ಮಾಡುತ್ತಾರೆ.
ದೇವಿಗೆ ಉಡಿ ತುಂಬುವವರಿಗೂ ಯಾರೂ ಭೂಮಿಯಲ್ಲಿ ಬಿತ್ತನೆ ಕಾರ್ಯ ಆರಂಭಿಸುವುದಿಲ್ಲ. ದೇವಿಯ ಉಡಿ ತುಂಬಿದ ನಂತರ ಉತ್ತಮ ಮಳೆಯಾದ ತಕ್ಷಣ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಇದು ತಲಾಂತರದಿಂದಲೂ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ.
ಇನ್ನೂ ಮುದ್ದಾಬಳ್ಳಿಯಲ್ಲಿ ಗ್ರಾಮ ದೇವಿಯ ಉಡಿ ತುಂಬಿದ ನಂತರದ ಮಂಗಳವಾರ ಗ್ರಾಮದಲ್ಲಿ ಹಾಲೆರೆಯುವ ಪದ್ದತಿ ಇದೆ. ಗ್ರಾಮ ದೇವತೆಯ ಮುಂದೆ ಮಣ್ಣಿನ ಗಡಗಿಯನ್ನು ತಂದು ಅದರಲ್ಲಿ ಧಾನ್ಯಗಳನ್ನು ಹಾಕಿ. ಗಡಗಿಯಲ್ಲಿ ಹಾಲು ಹಾಕುತ್ತಾರೆ. ಗ್ರಾಮದ ದಾಸಯ್ಯರನ್ನು ಕರೆದು ದೇವಿಯ ಮುಂದೆ ಇರುವ ಹಾಲಿನ ಗಡಗಿಗೆ ಪೂಜೆ ಸಲ್ಲಿಸಿ ನಂತರ ದಾಸಯ್ಯ ಈ ಗಡಗಿಯನ್ನು ಹೊತ್ತುಕೊಂಡು ಗ್ರಾಮದ ಸೀಮಾಂತರದ ಸುತ್ತಲು ಹೋಗಿ. ನಾಲ್ಕು ದಿಕ್ಕಿನಲ್ಲಿ ಪೂಜೆ ಸಲ್ಲಿಸಿ ಬರುತ್ತಾರೆ.
ಈ ಸಂದರ್ಭದಲ್ಲಿ ಡೊಳ್ಳು, ಭಾಜಾ ಭಜಂತ್ರಿಯೊಂದಿಗೆ ಜನರು ಪಾಲ್ಗೊಂಡು ತಮ್ಮ ಗ್ರಾಮದ ಸುತ್ತಲು ಹಾಲಿನ ಅಭಿಷೇಕ ಮಾಡಿ ಭೂಮಿಗೆ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಮಳೆ, ಬೆಳೆ ಚನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತಾರೆ, ಬೆಳೆಗೆ ಕೀಟ ಭಾದೆ ಬಾರದಂತೆ ಪ್ರಾರ್ಥಿಸುತ್ತಾರೆ.
ಈ ಸಂದರ್ಭದಲ್ಲಿ ಹಿಂದು, ಮುಸ್ಲಿಂ. ದಲಿತ, ಸವರ್ಣಿಯ ಎಂಬ ಬೇಧ ಭಾವವಿಲ್ಲದೆ ಇಡೀ ಗ್ರಾಮಸ್ಥರು ಒಗ್ಗಟ್ಟಿನಿಂದ ಹಾಲೆರೆಯುವ ಪದ್ದತಿಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದಿನ ಸಂಪ್ರಾದಾಯಗಳು ಮರೆಯಾಗಿವೆ ಎನ್ನುತ್ತಿರುವಾಗಲೇ ಗ್ರಾಮೀಣ ಜನರು ತಮ್ಮ ಹಿಂದಿನ ಸಂಪ್ರದಾಯ ಮರೆತಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.