ಸುದ್ದಿಮೂಲ ವಾರ್ತೆ
ಬೆಂಗಳೂರು,ಆ.31: ಶಿವಮೊಗ್ಗ ನಗರದಿಂದ 15 ಕಿಲೋಮೀಟರ್ ದೂರದ ಸೋಗಾನೆಯಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕುವೆಂಪು ವಿಮಾನ ನಿಲ್ದಾಣಕ್ಕೆ ಖಾಸಗಿ ಸಂಸ್ಥೆಯ ವಿಮಾನವು ಇಂದು ಬಂದಿಳಿಯುವ ಮೂಲಕ ಮಲೆನಾಡು ಭಾಗದ ಪ್ರಪ್ರಥಮ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸೇವೆ ಆರಂಭವಾದವು.
ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಕರ್ನಾಟಕದ ಅಭಿವೃದ್ಧಿಯ ಯಶೋಗಾಥೆಯಲ್ಲಿ ಇದೊಂದು ವಿನೂತನ ಅಧ್ಯಾಯವಾಗಿದೆ. ರಸಋಷಿ ಕುವೆಂಪು ಅವರ ಹೆಸರನ್ನು ಹೊಂದಿರುವ ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಸಹಕಾರಿಯಾಗಲಿದೆ ಎಂದರು.
ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂಪಾಯಿ ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಸಚಿವರು ಘೋಷಿಸಿದರು.
ಇದಕ್ಕೂ ಮುನ್ನ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ಮುಂತಾದ ಗಣ್ಯರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.50ಕ್ಕೆ ಹೊರಟು 11.05ಕ್ಕೆ ಶಿವಮೊಗ್ಗಕ್ಕೆ ತಲುಪಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ, ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.