ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ.13 : ಮಾಧ್ಯಮಗಳು ಬಿತ್ತರ ಮಾಡುತ್ತಿರುವಂತಹ ಭೀಭತ್ಸ ಪರಿಸ್ಥಿತಿ ಇಸ್ರೇಲ್ನಲ್ಲಿ ಇಲ್ಲ, ಮುಖ್ಯ ನಗರದಿಂದ 40 ಕಿ.ಮೀ ದೂರದಲ್ಲಿದ್ದ ನನಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಿಲ್ಲ. ರಾಯಭಾರಿ ಕಚೇರಿಯೂ ನಿರಂತರವಾಗಿ ಸಂಪರ್ಕದಲ್ಲಿತ್ತು ಎಂದು ಅಪರೇಷನ್ ಅಜಯ್ನ ಮೂಲಕ ಇಸ್ರೇಲ್ನಿಂದ ತಾಯ್ನಾಡಿಗೆ ಬಂದ ಮೊದಲ ಕನ್ನಡಿಗ ವಿಜಯಪುರದ ಈರಣ್ಣ ತಿಳಿಸಿದರು.
ಅಪರೇಷನ್ ಅಜಯ್ ಕಾರ್ಯಾಚರಣೆಯ ಮೂಲಕ ದೆಹಲಿಗೆ ಬಂದಿಳಿದಿದ್ದ ಐವರು ಕನ್ನಡಿಗರ ಪೈಕಿ ಶುಕ್ರವಾರ ಬೆಳಿಗ್ಗೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಈರಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ‘ಹಮಾಸ್ ಉಗ್ರರ ದಾಳಿ ಇಸ್ರೇಲ್ ವಾಸಿಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾಲ್ಕು ವರ್ಷದಿಂದ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಮಾಡಲು ವಿದ್ಯಾರ್ಥಿಯಾಗಿ ಇಸ್ರೇಲ್ಗೆ ತೆರಳಿದ್ದೆ, ಇಲ್ಲಿ ಕನ್ನಡಿಗ ವಿದ್ಯಾರ್ಥಿಗಳು 10 ರಿಂದ 15 ಜನ ವಿದ್ಯಾರ್ಥಿಗಳಿದ್ದು, ಅಲ್ಲಿರುವ ಕಾರ್ಮಿಕರ ಬಗ್ಗೆ ಮಾಹಿತಿ ಇಲ್ಲ, ಕಳೆದ ಜೂನ್ನಲ್ಲಿ ಭಾರತಕ್ಕೆ ಬಂದಿದ್ದ ನಾನು ಪುನಃ ಇಸ್ರೇಲ್ಗೆ ತೆರಳಿದ್ದೆ, ಹಮಾಸ್ ದಾಳಿಯಿಂದಾಗಿ ವಾಪಸ್ ಬರುವಂತಾಗಿದೆ’ ಎಂದರು.
‘ಇಸ್ರೇಲ್ನಲ್ಲಿರುವ ಕನ್ನಡಿಗರ ಕುಟುಂಬದವರು ಭಯ ಪಡುವ ಅಗತ್ಯತೆ ಇಲ್ಲ, ಎಲ್ಲರೂ ಸೌಖ್ಯವಾಗಿದ್ದಾರೆ. ದಿನನಿತ್ಯದ ಜನಜೀವನ ಎಂದಿನಂತೆ ಸಾಗುತ್ತಿದೆ. ಮಾಧ್ಯಮಗಳು ಬಿತ್ತರಿಸಿದಂತೆ ಅಲ್ಲಿ ಯಾವುದೇ ಆಹಾರ ಕೊರತೆ ಇಲ್ಲ ಅವೆಲ್ಲ ಸುಳ್ಳು, ಇಸ್ರೇಲ್ನಲ್ಲಿರುವ ಸೂಪರ್ ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದೆ’ ಎಂದರು.
ಇಸ್ರೇಲ್ ನವರೇ ಹಮಾಸ್ ಮೇಲೆ ದಾಳಿ ಮಾಡುತ್ತಿದ್ದಾರೆ. ಗಾಜಾ ಗಡಿ ಭಾಗದಲ್ಲಿ ಮಾತ್ರ ಆತಂಕ ಇದೆ. ಇಸ್ರೇಲ್ ಬೇರೆ ಭಾಗಗಳಲ್ಲಿ ಯಾವುದೇ ಆತಂಕ ಇಲ್ಲ. ಜನಜೀವನ ಎಂದಿನಂತೆ ನಡೆಯುತ್ತಿದೆ. ಯುದ್ಧದ ಭೀತಿ ಇದ್ದಾಗ ಎಚ್ಚರಿಕೆಯ ಸೈರನ್ ಬರುತ್ತದೆ. ಶಿಷ್ಟಾಚಾರದಂತೆ ಆಗ ಎಲ್ಲರೂ ಬಂಕರ್ಗೆ ಹೋಗಬೇಕಿತ್ತು, ಇದು ಯುದ್ಧದ ಪ್ರಾರಂಭದಲ್ಲಿ ಆದ ಘಟನೆ ಅಷ್ಟೇ’ ಎಂದು ತಿಳಿಸಿದರು.