ಬೆಂಗಳೂರು, ಆ.4: ಕಾಡಿಲ್ಲದ ಕಲ್ಯಾಣ ಕರ್ನಾಟಕ ಭಾಗದಿಂದ ಬಂದ ನನಗೆ ಮರಗಿಡಗಳ ಬಗ್ಗೆ ತಿಳಿದಿಲ್ಲ ಎಂದು ಮಲೆನಾಡಿನ ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಆದರೆ, ತಾವು ಅರಣ್ಯ ಸಚಿವರಾದ ಬಳಿಕ ಅವರದೇ ಕ್ಷೇತ್ರ ತೀರ್ಥಹಳ್ಳಿಯ ಮೇಗರವಳ್ಳಿ ವ್ಯಾಪ್ತಿಯ ಕೊಕ್ಕೊಡು ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿನ ಅರಣ್ಯ ನಾಶ ತಡೆದಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶವಾದ ತೀರ್ಥಹಳ್ಳಿಯ ಮೇಗರವಳ್ಳಿ ಅರಣ್ಯ ಕಚೇರಿ ವ್ಯಾಪ್ತಿಯ ಕೊಕ್ಕೋಡು, ಶಿವಳ್ಳಿ ಗ್ರಾಮದ (ಲ್ಯಾಂಡ್ ಮಾರ್ಕ್ ಹುಲಿ ಗುಡ್ಡ) ಸರ್ವೆ ನಂಬರ್ 80ರಲ್ಲಿ ಮರಗಳನ್ನು ಕಡಿದು, ಬುಡಕ್ಕೆ ಬೆಂಕಿ ಹಚ್ಚಿ ನೆಲಸಮ ಮಾಡಿ ಕಂದಾಯ ಭೂಮಿ ಎಂದು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಅರಣ್ಯ ನಾಶವಾದರೆ ಗುಡ್ಡ ಕುಸಿಯುವ ಭೀತಿ ಇದೆ ಎಂದು ಮಾಧ್ಯಮ ವರದಿಗಾರರಿಂದ ನಮ್ಮ ಕಚೇರಿಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಆದೇಶ ನೀಡಲಾಗಿದ್ದು, ಒತ್ತುವರಿ ಮಾಡಿದ್ದ ಭೂಮಿಯನ್ನು ಮರುವಶ ಪಡಿಸಿಕೊಳ್ಳಲಾಗಿರುತ್ತದೆ ಮತ್ತು ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಅದೇ ರೀತಿ ಸೊರಬ ತಾಲ್ಲೂಕಿನ ಮುಟಗುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಳಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪರಿಭಾವಿತ – ಕಾನು ಅರಣ್ಯದಲ್ಲಿ ಅವಸಾನದ ಅಂಚಿನಲ್ಲಿರುವ ಕೊಡಸೆ, ಕಾಸರಕ, ಅಳಲೆ, ಹೊನ್ನೆ, ತಾರೆಯಂತಹ ಬೆಲೆ ಬಾಳುವ ಮರಗಳನ್ನು ಉರುಳಿಸಿ, ಬುಡಕ್ಕೆ ಬೆಂಕಿ ಹಚ್ಚಿ ಧ್ವಂಸ ಮಾಡಿ, ಜೆಸಿಬಿಗಳಿಂದ ನೆಲ ಮಟ್ಟ ಮಾಡಿ, ಖಾಸಗಿ ಅಡಿಕೆ ತೋಟ ಮಾಡಲಾಗಿದೆ ಎಂಬ ದೂರು ಬಂದ ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಈ ಮಧ್ಯೆ ವಸತಿ ಪ್ರದೇಶಗಳ ಅಂಚಿನಲ್ಲಿರುವ ಕಾನನ ಪ್ರದೇಶದಲ್ಲಿ, ಪರಿಭಾವಿತ ಅರಣ್ಯ ಭೂಮಿಯಲ್ಲಿ ಕೆಲವರು ಅಡಕೆ ಸಸಿ ನೆಟ್ಟು ಬೇಲಿ ಹಾಕಿ, ಅಲ್ಲಿ ಬೆಳೆದ ಬೃಹತ್ ಮರಗಳನ್ನು ಕಡಿದು ನಕಲಿ ದಾಖಲೆ ಸೃಷ್ಟಿಸಿಕೊಂಡು ಅರಣ್ಯ ಒತ್ತುವರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲಾಗಿರುವ ಎಲ್ಲ ಅಡಕೆ ಸಸಿ ತೆರವಿಗೆ ಆದೇಶ ನೀಡಲಾಗಿದೆ.
ಅರಣ್ಯ ಇಲಾಖೆಯ ಪ್ರಥಮ ಆದ್ಯತೆಯೇ ಕಾನನ, ವೃಕ್ಷ ಮತ್ತು ವನ್ಯಜೀವಿ ಸಂರಕ್ಷಣೆಯಾಗಿದೆ. ಅದೇ ವೇಳೆ 1978ಕ್ಕೆ ಮೊದಲು ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದ ಹಾಗೂ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ ಬಡ ರೈತರ, ಮನೆ ಕಟ್ಟಿಕೊಂಡಿರುವ ಬಡವರಿಗೂ ನ್ಯಾಯ ಒದಗಿಸಲು ನಿಯಮಾನುಸಾರ ಮಾನವೀಯ ನೆಲೆಗಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅರಣ್ಯಗಳ್ಳರಿಗೆ ಖಂಡ್ರೆ ಎಚ್ಚರಿಕೆ: ಬೃಹತ್ ಪ್ರಮಾಣದಲ್ಲಿ ಎಕರೆಗಟ್ಟಲೆ ಅರಣ್ಯಭೂಮಿ ಒತ್ತುವರಿ ಮಾಡಿ, ಮರ ಕಡಿದು ರಸ್ತೆ ನಿರ್ಮಿಸಿ, ರೆಸಾರ್ಟ್, ಹೋಂಸ್ಟೇ ನಡೆಸುತ್ತಿರುವ ಹಾಗೂ ಹತ್ತಾರು ಎಕರೆ ತೋಟ ಮಾಡಿಕೊಂಡಿರುವ ಯಾರನ್ನೂ ಬಿಡುವುದಿಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
((()))
ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಬಿಜೆಪಿ ಸರ್ಕಾರದ್ದೇ ಒತ್ತಡ
ಬೆಂಗಳೂರು, ಆ. 4: ಉಪಗ್ರಹ ಚಿತ್ರ ನೋಡಿ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಿದ್ದಾರೆ ಎನ್ನುವ ಆರಗ ಜ್ಞಾನೇಂದ್ರ ಮತ್ತು ರಾಜ್ಯ ಬಿಜೆಪಿ ಮುಖಂಡರು, ತಮ್ಮದೇ ಸರ್ಕಾರ ಇದ್ದಾಗ ಈ ವರದಿ ಕೈಬಿಡುವಂತೆ ಏಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಎಲ್ಲ ಬಾಧ್ಯಸ್ಥರ (ಸ್ಟೇಕ್ ಹೋಲ್ಡರ್ಸ್) ಜೊತೆ ಚರ್ಚಿಸಿ ವರದಿ ಸಲ್ಲಿಸಲು ದಿನಾಂಕ 18.4.2022ರ ಆದೇಶ ಸಂಖ್ಯೆ F.No.1/4/2012-RE-ESZ ರೀತ್ಯ ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಒಂದು ಪರಿಶೀಲನಾ ಸಮಿತಿ ರಚಿಸಿದೆ. ಈ ಸಮಿತಿ ಅವಧಿ ಮುಗಿದಿದ್ದು, ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.
ಸಮಿತಿ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪಶ್ಚಿಮಘಟ್ಟದ ಎಲ್ಲ ಬಾಧ್ಯಸ್ಥರೊಂದಿಗೆ ಜೊತೆ ಮಾತನಾಡುತ್ತದೆ ಎಂದು ಆಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಈ ಒಂದು ವರ್ಷದ ಅವಧಿಯಲ್ಲಿ ಸಂಜಯ್ ಕುಮಾರ್ ಸಮಿತಿ ಪಶ್ಚಿಮಘಟ್ಟದ ಯಾವ ಪ್ರದೇಶಕ್ಕೆ ಭೇಟಿ ನೀಡಿ ಯಾವ ಬಾಧ್ಯಸ್ಥರನ್ನು ಭೇಟಿಮಾಡಿದೆ ಎಂಬ ಬಗ್ಗೆ ಮರಗಿಡಗಳ ಕಾಳಜಿ ಇರುವ ಆರಗ ಜ್ಞಾನೇಂದ್ರ ಉತ್ತರಿಸಲಿ ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಸಂಜಯ್ ಕುಮಾರ್ ನೇತೃತ್ವದ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದ್ದಾರೆ.