ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ: ನ.30: ದೇಶದ ಎಲ್ಲ ಬಡವರಿಗೆ,ಮಹಿಳೆಯರಿಗೆ ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯದವರಿಗೆ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಅನುಕೂಲಗಳನ್ನು, ಅವಕಾಶಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದರು.
ಅವರು ಗುರುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡ ಮರಳಿ ಗ್ರಾಮದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಮಂತ್ರಿಗಳು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದನ್ನು ನೇರಪ್ರಸಾರದ ಮೂಲಕ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ, ಯುವ ಸಮುದಾಯದವರ, ಮಹಿಳೆಯರ ಏಳಿಗೆಗಾಗಿ ಶ್ರಮಿಸಿದೆ. ಈವರೆಗೆ ಈ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದಿರುವವರ ಬಗ್ಗೆ ತಿಳಿಸಿಕೊಟ್ಟು ಇನ್ನು ಹೆಚ್ಚಿನ ಜನರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಅನುಕೂಲವಾಗುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಅನ್ಷುಲ್ ಗುಪ್ತಾ, ಕರ್ನಾಟಕ ಬ್ಯಾಂಕರುಗಳ ಸಮಿತಿ ಸಂಚಾಲಕ ಭಾಸ್ಕರ್ ಚಕ್ರವರ್ತಿ, ಕೆನರಾ ಬ್ಯಾಂಕ್ ನ ಕರ್ನಾಟಕ ವೃತ್ತದ ಮಹಾಪ್ರಬಂಧಕ ಗೋಪಿಕೃಷ್ಣ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ಸದಾನಂದ ಕಾಳಗಿ ಮತ್ತಿತರರು ಹಾಜರಿದ್ದರು.