ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.1: ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿಗಳ ಹೆಸರಿನಲ್ಲಿ 75 ಸಾವಿರ ಕೋಟಿಯನ್ನು ಜನರಿಂದ ಸುಲಿಗೆ ಮಾಡುತ್ತಿದೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಅವರೇ ಹೇಳಿದ್ದಾರೆ. ಈಗಾಗಲೇ ಜುಲೈ ಮುಗಿದಿದೆ. 50 ಸಾವಿರ ಕೋಟಿ ಕೊಡಲು ಹೋಗಿ ಜನರಿಗೆ 75 ಸಾವಿರ ಕೋಟಿ ಟೋಪಿ ಹಾಕುವ ಕೆಲಸವನ್ನು ಮಾಡುತ್ತಿದೆ. ಇದು ಖಂಡನೀಯ. ಇಂಥ ಮೋಸದಾಟ ಒಪ್ಪಲಸಾಧ್ಯ ಎಂದು ತಿಳಿಸಿದರು.
ನಿನ್ನೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನ ಸಂಬಂಧಿತ ಸಭೆ ಮಾಡಿ, ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಈ ಸಭೆ ಮಾಡಿದ್ದಾರೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ 24 ಅನುದಾನ ಕೊಡುವ ಶ್ರೇಷ್ಠ ಕೆಲಸ ಮಾಡಿದ್ದಾಗಿ ಸಿದ್ದರಾಮಯ್ಯನವರು ಎದೆ ಬಡಿದುಕೊಳ್ಳುತ್ತಿದ್ದರು. ಈಗ ಅವರು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದರು.
156 ವಸತಿ ಶಾಲೆಯ ಕಟ್ಟಡದ ಕಾಮಗಾರಿ ಕಳೆದ 3 ತಿಂಗಳಿನಿಂದ ನಿಲ್ಲಿಸಿದ್ದಾರೆ. 75 ಹಾಸ್ಟೆಲ್ಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. 108 ವಸತಿ ಶಾಲೆಗಳಿಗೆ ಪ್ರತಿ ಶಾಲೆಗೆ 10 ಎಕರೆಯಷ್ಟು ಭೂಮಿಯನ್ನು ನಾವು ನೀಡಿದ್ದೆವು. ಅವುಗಳಿಗೆ ಹಣ ಮಂಜೂರು ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಮಹದೇವಪ್ಪನವರು ಸುಮ್ಮನೆ ರಾಜಕೀಯಕ್ಕೆ ಬಂದವರಲ್ಲ. ಅವರಿಗೆ ದಲಿತ ಸಂಘರ್ಷ ಸಮಿತಿ ಹೋರಾಟದ ಹಿನ್ನೆಲೆ ಇದೆ. ಅವರು ಯಾವುದೇ ಕಾರಣಕ್ಕೂ ಅನುದಾನ ಹೊಂದಾಣಿಕೆಯನ್ನು ಒಪ್ಪಬಾರದು ಎಂದು ಆಗ್ರಹಿಸಿದರು. ಒಲ್ಲದ, ಭಾರವಾದ ಮನಸ್ಸಿನಿಂದ ಇದನ್ನು ಒಪ್ಪಿಕೊಂಡಿದ್ದಾಗಿ ಮಹದೇವಪ್ಪನವರು ಹೇಳಿದ್ದನ್ನು ಕೆಲವು ಪತ್ರಿಕೆಯವರು ಪ್ರಕಟಿಸಿದ್ದಾರೆ. ಮಹದೇವಪ್ಪನವರು ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಕ್ತಿಯಿಂದ ಇದಕ್ಕೆ ತಡೆ ಒಡ್ಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟ ಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂ ಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರಕಾರ ಹಾಕುತ್ತಿದೆ ಎಂದು ಟೀಕಿಸಿದರು.
ಬಡವರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡು 5 ಗ್ಯಾರಂಟಿ ಯೋಜನೆಗಳಿಗಾಗಿ 25 ರೀತಿಯಲ್ಲಿ ಬೆಲೆ ಏರಿಕೆ ಮಾಡಿದೆ. ಹಾಗಾಗಿ ಇದು ಬಡವರ ಪರ, ಹಿಂದುಳಿದವರ ಪರ, ದಲಿತರ ಪರವಾಗಿ ಇರುವ ಸರಕಾರ ಅಲ್ಲ. ಇದು ಹಿಂದುಳಿದ ವರ್ಗಗಳ, ದಲಿತರ, ಎಸ್ಸಿ, ಎಸ್ಟಿ ಸಮುದಾಯದ ವಿರೋಧಿ ಸರಕಾರ ಎಂದು ಅವರು ಆರೋಪಿಸಿದರು.
ಸರಕಾರ 11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ನೀಡುವುದನ್ನು ವಿರೋಧಿಸಿ ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ ಸೇರಿದಂತೆ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಿಸಿದರು. ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.