ಬೆಂಗಳೂರು,ನ.4 : ನಿಸ್ವಾರ್ಥದಿಂದ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ, ತಮ್ಮ ಬದ್ಧತೆ, ಕಠಿಣ ಪರಿಶ್ರಮ, ಧೈರ್ಯ ಮತ್ತು ಸ್ಥೈರ್ಯದಿಂದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಸಾಧಕರ ಸೇವೆ ನಿರಂತರವಾಗಿರಲಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಶಿಸಿದರು.
ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ” ನಮ್ಮ ಬೆಂಗಳೂರು ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರವು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ಅನೇಕ ಸ್ಟಾರ್ಟ್ಅಪ್ಗಳು ಮತ್ತು ಭಾರತೀಯ ಟೆಕ್ ಕಂಪನಿಗಳ ಉದ್ಯಮಕ್ಕೆ ಪ್ರಮುಖ ಕೇಂದ್ರವಾಗಿದೆ. ಹಿತಕರವಾದ ಹವಾಮಾನ ಮತ್ತು ಪರಿಸರದ ಕಾರಣದಿಂದ ಅತ್ಯಂತ ವಾಸಯೋಗ್ಯ ಭಾರತೀಯ ನಗರ ಎನ್ನಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, ಡಾ. ರಘುನಾಥ್, ಅಂಕಿತ್ ಪುರಿ, ಅಲ್ಬಿನಾ ಶಂಕರ್, ಇಂದುಮತಿ ಅವರಿಗೆ ನಮ್ಮ ಬೆಂಗಳೂರು ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಸಾಧಕರೇ ಯುವಪೀಳಿಗೆಗೆ ಸ್ಫೂರ್ತಿ. ಪ್ರಶಸ್ತಿ ಪಡೆದ ಎಲ್ಲಾ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಯಲ್ಲಿ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ರಾಜ್ಯಪಾಲರು ಹಾರೈಸಿದರು.
ಕಾರ್ಯಕ್ರಮದಲ್ಲಿ ಮೈಕ್ರೊಲೆಂಡ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್, ಎವಿಎಎಸ್ ನ ಸ್ಥಾಪಕ ಟ್ರಸ್ಟಿ ಅನಿತಾ ರೆಡ್ಡಿ, ಏಷ್ಯನ್ ನ್ಯೂಸ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಕೆ. ಸಂಜಯ್ ಪ್ರಭು, ವಿನೋದ್ ಜೆಕವ್ ಉಪಸ್ಥಿತರಿದ್ದರು.