ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.23: ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮಾ.24ರಿಂದ ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಸಾರಿಗೆ ನೌಕರರು ಮುಂದಿನ ಮೂರು ವಾರಗಳ ಕಾಲ ಯಾವುದೇ ರೀತಿಯ ಮುಷ್ಕರ ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಬಸ್ಗಳ ಸಂಚಾರ ಬಂದ್ ಮಾಡಿ ಪ್ರತಿಭಟಿಸುವ ನಿರ್ಧಾರವನ್ನು ಸಾರಿಗೆ ನೌಕರರು ವಾಪಸ್ ಪಡೆದಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠ ಆದೇಶ ಈ ಹೊರಡಿಸಿದೆ. ಇನ್ನೂ ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶಿಸಿದೆ.
ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಾ.21ರಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ, ಸರ್ಕಾರ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿದ ಬಳಿಕ ಮುಷ್ಕರ ವಾಪಸ್ ಪಡೆದಿದ್ದರು. ಸಾರಿಗೆ ನಿಗಮಗಳಲ್ಲಿ ಎರಡು ಬಣಗಳಿದ್ದು, ಮತ್ತೊಂದು ಬಣ ಶುಕ್ರವಾರದಿಂದ ಬಂದ್ಗೆ ಕರೆ ನೀಡಿತ್ತು.
ಸರ್ಕಾರಿ ನೌಕರರ ಸರಿಸಮಾನಾದ ವೇತನ ನೀಡಬೇಕು, ನಾಲ್ಕು ನಿಗಮಗಳ ನೌಕರರ ಸಂಘಕ್ಕೆ ಚುನಾವಣೆ ನಡೆಸಬೇಕು, ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕೂ ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು, ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು
ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು, ಅವರಿಗೆ ಸರಿಯಾದ ರೀತಿ ಪಿಂಚಣೆ ಸೌಲಭ್ಯವನ್ನು ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.