ಬೆಂಗಳೂರು, ಜೂ.28: ಅನ್ನಭಾಗ್ಯ ಯೋಜನೆಗೆ ಅಕ್ಕಿ ಸಿಗದ ಕಾರಣ ಕೊನೆಗೂ ಅಕ್ಕಿಯ ಬದಲು ಹಣ ನೀಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪರ್ಯಾಯ ಮಾರ್ಗ ಹುಡುಕಿಕೊಂಡಿದೆ.
ಜು.1ರಿಂದ ರಾಜ್ಯದ 4.42 ಕೋಟಿ ಬಿಪಿಎಲ್ ಪಡಿತರದಾರರಿಗೆ ಪ್ರತಿಯೊಬ್ಬರಿಗೂ ತಲಾ 5 ಕೆ.ಜಿ. ಅಕ್ಕಿ ನೀಡುವ ವಾಗ್ದಾನ ಮಾಡಿದ್ದ ರಾಜ್ಯ ಸರ್ಕಾರದ ಈ ಮಹತ್ವದ ಪೂರ್ಣ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದಲ್ಲದೆ ಇತರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ನಡೆಸಿದ ಪ್ರಯತ್ನ ಸಕಾಲಕ್ಕೆ ಕೈಗೂಡದ ಕಾರಣ ಕೊನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿಯ ಬದಲು ಕುಟುಂಬದ ಯಜಮಾನನ ಖಾತೆಗೆ ಪ್ರತಿ ಕೆ.ಜಿ.ಗೆ 34ರೂ. ನಂತೆ ಗರಿಷ್ಠ ಐದು ಜನರಿಗೆ ಅನ್ವಯ ಆಗುವಂತೆ 25 ಕೆಜಿ ಅಕ್ಕಿಯ ಮೊತ್ತವನ್ನು ಪಾವತಿ ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್ ಮತ್ತು ಆಹಾರ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಸುದ್ದಿಗಾರರಿಗೆ ತಿಳಿಸಿದರು.
ಜು.1ರಿಂದಲೇ ಅಕ್ಕಿಯ ಬದಲು ಅವರ ಖಾತೆಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ಬಿಪಿಎಲ್ ಪಡಿತರದಾರರ ಆಧಾರ್ ಕಾರ್ಡ್ ಲಿಂಕ್ ಸಮೇತ ಬ್ಯಾಂಕ್ ಖಾತೆಗಳ ವಿವರ ಲಭ್ಯವಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಮನೆಯ ಮುಖ್ಯಸ್ಥನ ಖಾತೆಗೆ ಈ ಹಣ ಜಮೆ ಮಾಡಲಾಗುವುದು ಮತ್ತು ಏನಾದರೂ ಸಣ್ಣಪುಟ್ಟ ತಾಂತ್ರಿಕ ಆಡಳಿತಾತ್ಮಕ ದೋಷಗಳಿದ್ದರೂ ಸಹ ಅದನ್ನು ಸರಿಪಡಿಸಿ ಹಣ ಸಂದಾಯ ಮಾಡಲಾಗುವುದು ಎಂದು ಉಭಯ ಸಚಿವರು ಸ್ಪಷ್ಟಪಸಿದರು.
ಕೇಂದ್ರ ಸರ್ಕಾರ ಈ ಮುಂಚೆ ಎಫ್ಸಿಐ ಮೂಲಕ ಅಕ್ಕಿ ನೀಡುವುದಾಗಿ ಹೇಳಿ ಬಳಿಕ ಅಕ್ಕಿ ನೀಡಲು ನಿರಾಕರಿಸಿ ಬಡವರ ಯೋಜನೆಗೆ ದ್ರೋಹ ಮಾಡಿದೆ ಎಂದು ಆರೋಪಿಸಿದ ಉಭಯ ಸಚಿವರುಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಈಗಾಗಲೇ ಕೇಂದ್ರ ಉಗ್ರಾಣ, ನಾಫೆಡ್ ಮತ್ತು ಬಹಿರಂಗ ಟೆಂಡರ್ ಕರೆದು ಅಕ್ಕಿ ಖರೀದಿಗೆ ಪ್ರಕ್ರಿಯೆಗಳು ಪ್ರಾರಂಭ ಮಾಡಿದ್ದು, ಅದು ತಡವಾಗುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಬಳಿ ಪಡಿತರದಾರರಿಗೆ ವಿತರಿಸಲು 135 ಲಕ್ಷ ಟನ್ ಅಕ್ಕಿ ಮಾತ್ರ ಸಾಕು. ಆದರೆ, ಕೇಂದ್ರದ ಬಳಿಕ 260 ಲಕ್ಷ ಟನ್ ಅಕ್ಕಿ ಸಂಗ್ರಹ ಇದ್ದರೂ ಅದನ್ನು ಮುಕ್ತ ಮಾರುಕಟ್ಟೆಯ ಮೂಲಕ ಖಾಸಗಿಯವರಿಗೆ 31 ರೂಪಾಯಿಗೆ ಕೆಜಿಯಂತೆ ಮಾರಾಟ ಮಾಡಿದ್ದಾರೆ. ಆದರೆ, ನಾವು ಕೆ.ಜಿ.ಗೆ 34 ರೂ. ನೀಡುವುದಾಗಿ ಹೇಳಿದರೂ ಅಕ್ಕಿ ನೀಡಿಲ್ಲ. ಇದು ಕೇಂದ್ರ ಸರ್ಕಾರದ ದುರುದ್ದೇಶ ಎಂದು ಟೀಕಿಸಿದ ಅವರು, ಇದಕ್ಕಾಗಿ ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕಾದ ಕಾರಣ ಜುಲೈ ತಿಂಗಳಿನಿಂದಲೇ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ಧೃಡಪಡಿಸಿದರು.
ಇದಲ್ಲದೆ, ರಾಜ್ಯ ಸರ್ಕಾರ ಎಪಿಎಲ್ ಕಾರ್ಡ್ದಾರರಿಗೆ ನೀಡಲು 20 ಸಾವಿರ ಟನ್ ಅಕ್ಕಿ ಸಂಗ್ರಹವಿದೆ ಇದೇ ಸಂದರ್ಭದಲ್ಲಿ ಸಚಿವ ಮುನಿಯಪ್ಪ ಸ್ಪಷ್ಟಪಡಿಸಿ, ಶೇ 95ಕ್ಕೂ ಹೆಚ್ಚು ಪಡಿತರದಾರರ ಬ್ಯಾಂಕ್ ಖಾತೆ ಹೊಂದಿರುವ ಮಾಹಿತಿ ತಮ್ಮಲ್ಲಿ ಲಭ್ಯವಿದೆ. ಆ ಮೂಲಕ ಹಣ ಜಮೆ ಮಾಡಲು ಯಾವುದೇ ತೊಂದರೆ ಆಗುವುದಿಲ್ಲ ಎಂದು ಉತ್ತರಿಸಿದರು.
ರಾಜ್ಯದಲ್ಲಿ 85 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಒಟ್ಟು 4 ಕೋಟಿ 42 ಲಕ್ಷ ಪಡಿತರದಾರರು ತಲಾ ಐದು ಕೆಜಿ ಅಕ್ಕಿ ಬದಲು 170 ರೂ. ಪಡೆಯುವುದರಿಂದ ಒಟ್ಟು ಮಾಸಿಕ ಹಣ ಸರಾಸರಿ 750 ಕೋಟಿ ರೂ. ಮಾಸಿಕ ವೆಚ್ಚವಾಗಲಿದ್ದು, ಇದಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸುವ ಮೂಲಕ ತಮ್ಮ ಮಾತು ನಡೆಸಿಕೊಳ್ಳುವುದು ಮುಖ್ಯ ಎಂಬುದನ್ನು ಖಚಿತಪಡಿಸಿದರು.
ಇದು ಕೇಂದ್ರದ ಮೇಲೆ ಅವಲಂಬಿತವಾಗದೆ ಸ್ವಂತವಾಗಿ ರಾಜ್ಯ ಸರ್ಕಾರವೇ ಅಕ್ಕಿ ಖರೀದಿಸುವುದಾಗಲೀ, ಲೆವಿ ಮೂಲಕ ಸಂಗ್ರಹಿಸುವುದಾಗಲೀ ಸರ್ಕಾರದ ಮುಂದೆ ಪ್ರಸ್ತಾವನೆಗಳು ಇವೆ. ಆದರೆ, ಈ ಬಗ್ಗೆ ಸರ್ಕಾರ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಇದು ತಾತ್ಕಾಲಿಕ ವ್ಯವಸ್ಥೆ ಆಗಿದ್ದು, ಅಕ್ಕಿ ಸಿಗುವವರೆಗೆ ಇದನ್ನು ಮುಂದುವರಿಸುತ್ತೇವೆ ಎಂದರು.
ಪ್ರತಿಪಕ್ಷಗಳು ಇದೇ ವಿಷಯವನ್ನು ಇಟ್ಟುಕೊಂಡು ಈಗಾಗಲೇ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಜು.3ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದವು. ಅದಕ್ಕೆ ಮುನ್ನವೇ ರಾಜ್ಯ ಸರ್ಕಾರ ಅಕ್ಕಿಯ ಬದಲು ಹಣ ನೀಡುವ ನಿರ್ಧಾರ ಪ್ರಕಟಿಸಿ ಪ್ರತಿಪಕ್ಷಗಳಿಗೆ ತಿರುಗುಬಾಣ ಬಿಟ್ಟಿದ್ದಾರೆ.
ಒಂದು ವೇಳೆ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದರೂ ಕೇಂದ್ರ ಸರ್ಕಾರವೇ ಅಕ್ಕಿ ನೀಡದೆ ಬಡವರ ಯೋಜನೆಗೆ ದ್ರೋಹ ಬಗೆದಿದೆ ಎಂದು ಕೇಂದ್ರದ ಮೇಲೆಯೇ ಗೂಬೆ ಕೂರಿಸಲು ಸಹ ಕರ್ನಾಟಕ ಸರ್ಕಾರ ಪ್ರತಿತಂತ್ರವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಯ ಪ್ರಥಮ ಅಧ್ಯಾಯ ಆರಂಭವಾದಂತೆ ಆಗಿದ್ದು, ಜು.1ರಿಂದ ಚಾಲನೆ ನಂತರ ಇದರ ಸಾಧಕ-ಬಾಧಕಗಳನ್ನು ಕಾದು ನೋಡಬಹುದಾಗಿದೆ.
ಡಿಬಿಟಿ ಮೂಲಕ ವರ್ಗಾವಣೆ
ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ1 ರಿಂದ ನೀಡಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ.
ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರೆಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಎರಡೂವರೆ ಕೆಜಿ ಅಕ್ಕಿ ಬರುತ್ತದೆ
ಕಾಂಗ್ರೆಸ್ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನಿಡಿದ್ದರು. ಈಗ ಅಕ್ಕಿಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾತುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ.
– ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ