ಜರುಸಲೇಂ, ಅ.8: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿದ ನಂತರ ಅಧಿಕೃತವಾಗಿ ಯುದ್ಧ ಆರಂಭವಾಗಿದೆ. ಎರಡೂ ಕಡೆಯಿಂದ ಗುಂಡು, ಬಾಂಬ್ ದಾಳಿ ನಡೆಯುತ್ತಿದೆ. ಈವರೆಗೆ ಇಸ್ರೇಲಿನ್ 600 ಮಂದಿ ಸಾವನ್ನಪ್ಪಿದ್ದರೆ, ಇಸ್ರೇಲ್ ಪಡೆಗಳಿಂದ 400ಕ್ಕೂ ಅಧಿಕ ಹಮಾಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ದಾಳಿಯನ್ನು ಇಸ್ರೇಲ್ಗೆ “ಕಪ್ಪು ದಿನ” ಎಂದು ಕರೆದಿದ್ದು, ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹಮಾಸ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ನಾಶ ಮಾಡಲು ಇಸ್ರೇಲ್ ತಮ್ಮ ಎಲ್ಲಾ ಬಲ ಬಳಸುತ್ತಿದೆ. ನಾವು ಅವರನ್ನು ನಾಶ ಮಾಡುವ ಮೂಲಕ ಈ ಕರಾಳ ದಿನದ ಸೇಡು ತೀರಿಸಿಕೊಳ್ಳುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ.
ಗಾಝಾ ಪಟ್ಟಿಯಲ್ಲಿನ ಹಮಾಸ್ ಅಡಗುತಾಣಗಳ ಬಳಿ ವಾಸಿಸುವ ಪ್ಯಾಲೆಸ್ಟೀನಿಯಾದವರಿಗೆ ಎಚ್ಚರಿಕೆ ನೀಡಿದ್ದು, ಜಾಗ ಖಾಲಿ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹಮಾಸ್ ಅಡಗುತಾಣಗಳ ಮೇಲೆ ಬಲವಾದ ದಾಳಿ ಮಾಡುವುದರಿಂದ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಪ್ಯಾಲೆಸ್ಟಿನ್ ಜನಗಳಿಗೆ ಇಸ್ರೇಲ್ ಹೇಳಿದೆ.
ಇಸ್ರೇಲ್ ದಾಳಿಯಿಂದ ಪ್ಯಾಲೆಸ್ಟಿನ್ನಲ್ಲೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪಡೆಗಳು ಕೂಡ ಪ್ಯಾಲೆಸ್ಟಿನ್ ಪ್ರದೇಶಗಳ ಮೇಲೆ ರಾಕೆಟ್, ಬಾಂಬ್ ದಾಳಿ ನಡೆಸುತ್ತಿದ್ದು, ಕನಿಷ್ಠ 400 ಮಂದಿ ಪ್ಯಾಲೆಸ್ಟಿನ್ ಪ್ರಜೆಗಳು ಸಾವನ್ನಪ್ಪಿದ್ದು, 1700 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಪ್ರತಿಯಾಗಿ ಹಮಾಸ್ ಗುಂಪು ಬೃಹತ್ ರಾಕೆಟ್ ದಾಳಿ ಮಾಡಿದ್ದಲ್ಲದೆ, ನೆಲ ಮತ್ತು ಸಮುದ್ರದ ಮಾರ್ಗವಾಗಿ ಕೂಡ ಇಸ್ರೇಲ್ ಮೇಲೆ ಆಕ್ರಮಣ ಮಾಡುತ್ತಿದೆ. ಮೂಲಗಳ ಪ್ರಕಾರ ಈವರೆಗೆ ಹಮಾಸ್ ಉಗ್ರರ ದಾಳಿಯಿಂದ 600 ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು 1000 ಮಂದಿ ಗಾಯಗೊಂಡಿದ್ದಾರೆ.
ಅಮೆರಿಕಾದಿಂದ ಇಸ್ರೇಲ್ಗೆ ಸಹಾಯಹಸ್ತ:
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಇಸ್ರೇಲ್ ಪರ ನಿಂತಿದೆ. ಇಸ್ರೇಲ್ಗೆ ನೆರವಿನ ಹಸ್ತ ಚಾಚಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಬರೋಬ್ಬರಿ 800 ಕೋಟಿ ಡಾಲರ್ ಮೌಲ್ಯದ ತುರ್ತು ಸೇನಾ ನೆರವನ್ನು ಘೋಷಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಸೇನಾ ನೆರವಿನ ಪ್ಯಾಕೇಜ್ ಅನ್ನು ಅನುಮೋದಿಸಿದ್ದು, ಪ್ಯಾಲೇಸ್ತಿನನ ಹಮಾಸ್ ಉಗ್ರರು ದಾಳಿ ನಡೆಸಿರುವ ಇಸ್ರೇಲ್ಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಭಾರತೀಯ ನಾಗರಿಕರು ಸುರಕ್ಷಿತವಾಗಿರುವಂತೆ ಸಲಹೆ
ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್ಗಳನ್ನು ಗಮನಿಸಲು ಕೇಳಿಕೊಂಡಿದೆ. ದಯವಿಟ್ಟು ಎಚ್ಚರಿಕೆಯಿಂದ ಇರಿ, ಅನಗತ್ಯ ಓಡಾಟವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರ ಇರಿ ಎಂದು ಅದು ಸಲಹೆಯಲ್ಲಿ ಹೇಳಿದೆ.