ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂ 30 : ಪ್ರವಾಸಕ್ಕೆ ಹೋದ ಹೆಂಡತಿ ವಾಪಸ್ ಬಂದಿಲ್ಲವೆಂದು ಸಿಟ್ಟಿಗೆದ್ದ ಮದ್ಯವ್ಯಸನಿಯೊಬ್ಬ ಇಲ್ಲಿನ ನಗರ ಬಸ್ ನಿಲ್ದಾಣದಲ್ಲಿ ಬಸ್ ಚಕ್ರದಡಿ ತಲೆ ಇಟ್ಟು ಮಲಗಿ ಅವಾಂತರ ಸೃಷ್ಟಿಸಿದ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಮರಳಿ ಬಂದಿಲ್ಲ ಎಂದು ಕೂಗಾಡಿದ ಆತ ಬಿಎಂಟಿಸಿ ಬಸ್ ಚಕ್ರದ ಕೆಳಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆದೇಶ ಹಿಂದಕ್ಕೆ ಪಡೆಯಬೇಕು. ಅಂದರೆ ಮಾತ್ರ ಇಲ್ಲಿಂದ ಏಳುವುದು ಎಂದು ಪಟ್ಟು ಹಿಡಿದ. ಆತನನ್ನು ಸಮಾಧಾನಪಡಿಸಲು ಸಾರಿಗೆ ಸಿಬ್ಬಂದಿ ಪರದಾಡಿದರು.
ಆದರೆ, ಆತ ಮಾತ್ರ ಅಲ್ಲಿಂದ ಕದಲಿಲ್ಲ. ಮಹಿಳೆಯರಿಗೆ ಅಷ್ಟೇ ಏಕೆ ಪುರುಷರಿಗೂ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಹೊಸ ವರಾತ ತೆಗೆದ. ಆತನ ಕಿರಿಕಿರಿ ಮುಂದುವರಿದಾಗ ಸ್ಥಳದಲ್ಲಿದ್ದ ಕೆಲವರು ಬಸ್ ಕೆಳಗೆ ಮಲಗಿದ್ದ ಆತನನ್ನು ಹೊರ ಎಳೆದು ತಂದು ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದರು.
ಅರ್ಧ ಗಂಟೆಗೂ ಹೆಚ್ಚು ಬಸ್ ನಿಲ್ದಾಣದಲ್ಲಿ ನಡೆದ ಈ ಪ್ರಹಸನದಿಂದ ನೂರಾರು ಜನರು ಪುಕ್ಕಟೆ ಮನರಂಜನೆ ಪಡೆದರು. ಇದರಿಂದ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆಗೂ ಹೆಚ್ಚು ಜನ ದಟ್ಟಣೆ ಉಂಟಾಗಿತ್ತು.