ಬಳ್ಳಾರಿ, ಮೇ. 30:ಮೈಸೂರಿನ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಅಂತ್ಯಕ್ರಿಯೆ ಸಂಗನಕಲ್ಲು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಬೆಳಗ್ಗೆ ಒಂದೇ ಸಾಲಿನಲ್ಲಿ ಒಂಭತ್ತು ಪ್ರತ್ಯೇಕ ಕುಣಿಗಳಲ್ಲಿ ಸಾಮೂಹಿಕವಾಗಿ ವಿಧಿ ಸಂಪ್ರದಾಯಗಳ ಪ್ರಕಾರ ನೆರವೇರಿತು.
ಇಡೀ ಗ್ರಾಮ ಶೋಕದಲ್ಲಿ ಮುಳುಗಿತ್ತು. ಮಾಜಿ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶಪ್ರಸಾದ್ ಸ್ಥಳದಲ್ಲಿದ್ದುಕೊಂಡು ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಮೃತರ ಅಂತ್ಯಸಂಸ್ಕಾರಕ್ಕಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಧನ ಸಹಾಯ ಮಾಡಿದ್ದೂ ಅಲ್ಲದೇ, ಪಾರ್ಥಿವ ಶವಗಳಿಗೆ ಪೂಜೆ ಮಾಡಿ, ಹಾರ ಹಾಕುವ ಮೂಲಕ ಗ್ರಾಮದ ಜನರ ಸೆಳೆದರು.
ನಾಲ್ಕು ಆಂಬುಲೆನ್ಸ್ಗಳಲ್ಲಿ ಮೈಸೂರಿನಿಂದ ಮಂಗಳವಾರ ಬೆಳಗ್ಗೆ ಆಗಮಿಸಿದ ಶವಗಳನ್ನು ಮೃತರ ಮನೆಯಂಗಳಲ್ಲಿ ಕೆಳಕ್ಕಿಳಿಸುತ್ತಿದ್ದಂತೆಯೇ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಿ ಮೃತರ ಗುಣಗಾನ ಮಾಡಿದರು. ಎಲ್ಲೆಲ್ಲೂ ಘಟನೆ ಕುರಿತು ವ್ಯಾಪಕ ಚರ್ಚೆ ನಡೆಸಿ, ಇಡೀ ಗ್ರಾಮವೇ ವಿಷಾಧ ವ್ಯಕ್ತಪಡಿಸಿತು.
ಮನೆಯಂಗಳದಲ್ಲಿ ಕುಟುಂಬದ ಸದಸ್ಯರು ವಿಧಿ ಸಂಪ್ರದಾಯಗಳನ್ನು ನೆರವೇರಿಸುತ್ತಿದ್ದಂತೆಯೇ, ಆಂಬುಲೆನ್ಸ್ಗಳಲ್ಲಿ ಶವಗಳನ್ನು ವೀರಶೈವ ರುದ್ರಭೂಮಿಗೆ ತೆಗೆದುಕೊಂಡು ಹೋಗಿ, ಅಲ್ಲಿಯೂ ವಿವಿಧ ಸಂಪ್ರದಾಯಗಳನ್ನು ನೆರವೇರಿಸಿದ ನಂತರ ಪ್ರತ್ಯೇಕವಾಗಿ ಶವಗಳನ್ನು ಕುಣಿಗಳಿಗೆ ಇರಿಸಿದ ನಂತರ, ಕುಟುಂಬದ ಸದಸ್ಯರು, ಬಂಧುವರ್ಗ ಮತ್ತು ಗ್ರಾಮಸ್ಥರು ಸಾಲುಗಟ್ಟಿ ಮಣ್ಣು ನೀಡಿ, ಮೃತರ ಆತ್ಮಕ್ಕೆ ಶಾಂತಿಕೋರಿ ಶೋಕ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು, ಸಚಿವ ಬಿ. ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಜಿಲ್ಲಾ ಆರೋಗ್ಯ ಅಧಿಕಾರಿ ಎಚ್.ಎಲ್. ಜನಾರ್ಧನ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಸೇರಿ ಅನೇಕ ಅಧಿಕಾರಿಗಳು ಸ್ಥಳದಲ್ಲಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿರುವ
ಪರಿಹಾರವನ್ನು ವಾರಸುದಾರರಿಗೆ ವಿತರಣೆ ಮಾಡಲು ಸಂಬಂಧಿಸಿದವರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಪರಿಸ್ಥಿತಿಯನ್ನು ಅವಲೋಕನ ಮಾಡಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮೈಸೂರು ಸಮೀಪ ಸೋಮವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಇನ್ನೋವಾ ಮತ್ತು ಖಾಸಗಿ ಬಸ್ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ ಬಿಳ್ಯಾಳ ಮಂಜುನಾಥ್ (35) ಪತ್ನಿ ಪೂರ್ಣಿಮಾ (30) ಮಗ ಪವನ (10), ಕಾರ್ತಿಕ (08), ಸಂದೀಪ (24), ತಾಯಿ ಸುಜಾತ (40), ತಂದೆ ಕೊಟ್ರೇಶ್ (45), ಗಾಯತ್ರಿ (35), ಮಗಳು ಶ್ರಾವ್ಯ (03) ಅವರು ಮೃತಪಟ್ಟಿದ್ದನ್ನು ಸ್ಮರಿಸಬಹುದು.
ಸಚಿವ ಬಿ. ನಾಗೇಂದ್ರ ಭೇಟಿ
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ, ಸಚಿವ ಬಿ. ನಾಗೇಂದ್ರ ಅವರು ಕೆ.ಆರ್. ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು ಅಲ್ಲದೇ, ಗಾಯಾಳುಗಳಿಗೆ ಸೂಕ್ತವಾದ – ಉತ್ತಮವಾದ ಚಿಕಿತ್ಸೆಯನ್ನು ನೀಡಲು ವೈದ್ಯರಿಗೆ ಸೂಚನೆ ನೀಡಿದ್ದನ್ನು ಸ್ಮರಿಸಬಹುದು.