ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೫: ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಪಕ್ಷದ ಶಾಲು ಹಾಕಿಕೊಂಡು ಹೋಗಬಾರದು. ದೇವಸ್ಥಾನದಲ್ಲಿ ಸಭೆ ನಡೆಸಬಾರದು ಎಂಬ ನಿಯಮವಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಿದೆ. ಆದರೂ ಅಧಿಕಾರಿಗಳು ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಹುಲಿಯಾಪುರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಬಿಜೆಪಿ ಶಾಲು ಹಾಕಿಕೊಂಡು ಶ್ರೀವಿಶ್ವನಾಥ ದೇವಸ್ಥಾನದಲ್ಲಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕರ್ತರ ಸೇರ್ಪಡೆಯ ಫೋಟೊಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಫೇಸ್ ಬುಕ್ ನಲ್ಲಿ ಫೋಟೊ ಹಂಚಿಕೊಡಿದ್ದಾರೆ. ದೊಡ್ಡನಗೌಡ ಪಾಟೀಲ ಕುಷ್ಟಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಸಮಾಜಿಕ ಜಾಲತಾಣಗಳಲ್ಲಿ ಫೋಟೊ ಹರಿದಾಡುತ್ತಿದ್ದರೂ ಚುನಾವಣಾಧಿಕಾರಿಗಳು ಕ್ರಮ ವಹಿಸದ ನಿರ್ಲಕ್ಷö್ಯ ವಹಿಸಿದ್ದಾರೆ.
ಇದೇ ವೇಳೆ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಿಂದಲೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಕೊಪ್ಪಳದ ಕಾಂಗ್ರೆಸ್ ಅಭ್ಯರ್ಥಿ ಕೆ ರಾಘವೇಂದ್ರ ಹಿಟ್ನಾಳ ಕೊಪ್ಪಳ ತಾಲೂಕಿನ ಹೈದರನಗರದ ದೇವಸ್ಥಾನದಲ್ಲಿ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಪಕ್ಷದ ಶಾಲು ಹಾಕಿಕೊಂಡು ಪ್ರಚಾರ ಸಭೆಯನ್ನು ಎರಡು ದಿನಗಳ ಹಿಂದೆ ನಡೆಸಿದ್ದಾರೆ. ಶಾಸಕ ಹಿಟ್ನಾಳರ ಪ್ರಚಾರ ಸಭೆಯ ಫೋಟೊಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆದರೂ ಚುನಾವಣಾಧಿಕಾರಿಗಳು ಸುಮ್ಮನೆ ಇರೋದು ಅನುಮಾನಕ್ಕೆ ಕಾರಣವಾಗಿದೆ.

