ಮೈಸೂರು, ಜೂ.19: ಹೋದ ವರ್ಷ ಏಪ್ರಿಲ್ ನಲ್ಲಿ ಮುಂಗಾರು ಅಬ್ಬರಿಸಿ ಆರ್ಭಟಿಸಿತ್ತು. ಆದರೆ ಈ ವರ್ಷ ಜೂನ್ ಕಳೆಯುತ್ತಿದ್ದರೂ ಮುಂಗಾರು ಮಳೆ ಕೃಪೆ ತೋರುತ್ತಿಲ್ಲ. ಇದರಿಂದ ಮೈಸೂರು ಭಾಗದ ಜನರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ (ಕೆಆರ್ಸ್) ಜಲಾಶಯದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸೋಮವಾರ 79 ಅಡಿಗಳಿಗೆ ಇಳಿಕೆ ಆಗಿತ್ತು.
ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೇ ಈ ಜಲಾಶಯದ ಕಾವೇರಿ ನೀರನ್ನು ಅವಲಂಬಿಸಿರುವ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೂ ತೊಂದರೆ ಆಗುತ್ತದೆ.
ಜಲಾಶಯದಲ್ಲಿ ಈಗ ಕೇವಲ 10.811 ಟಿಎಂಸಿ ನೀರಿದೆ. ಈ ಪೈಕಿ 3.811 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಇದನ್ನು ಬಳಸುವಂತಿಲ್ಲ. ಮಳೆರಾಯ ಕೃಪೆ ಮಾಡಿದರೆ ಮಾತ್ರ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.
ನೀರು ಅತಿ ಕಡಿಮೆಯಾದರೆ ಲಭ್ಯ ನೀರನ್ನು ಬಳಕೆ ಮಾಡಿಕೊಳ್ಳಲು, ಮುನ್ನೆಚ್ಚರಿಕೆಯಾಗಿ ಜಲಾಶಯ ನಿರ್ಮಾಣದ ವೇಳೆಯೇ ಮಾಡಿರುವ ಒಳಭಾಗದ ನಾಲೆಯಿಂದ ಈಗ ಕುಡಿಯಲು ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ಈ ನಾಲೆಯಿಂದಲೂ ನೀರು ಬಿಡಲು ಸಾಧ್ಯವಿಲ್ಲ.
ಇಂದಿನ ನೀರಿನಮಟ್ಟ(ಜೂ. 19)
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 79.01 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ -10.811 ಟಿಎಂಸಿ
ಒಳ ಹರಿವು – 289 ಕ್ಯೂಸೆಕ್
ಹೊರ ಹರಿವು – 3,10 ಕ್ಯೂಸೆಕ್