ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.11:ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ವಾಂತಿ-ಬೇಧಿಯಿಂದ ಮೃತಪಟ್ಟ ಬಾಲಕಿ ಕುಟುಂಬಕ್ಕೆ 2 ಲಕ್ಷ ರೂ.ಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು.
ಬಿಜಕಲ್ ಗ್ರಾಮದಲ್ಲಿ ಮೃತಪಟ್ಟ 9 ವರ್ಷದ ಬಾಲಕಿ ನಿರ್ಮಲಾ ತಂದಿ ವೀರಪ್ಪ ನೀರಲೂಟಿ ಕುಟುಂಬದ ಸದಸ್ಯರನ್ನು
ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿ ಹಾಗೂ ತಾತ್ಕಾಲಿಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೂ ಭೇಟಿ ಮಾಡಿದ ಬಳಿಕ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಬಾರದಂತೆ ಕಟ್ಟುನಿಟ್ಟಾಗಿ ನಿಗಾವಹಿಸುವಂತೆ ಜಿಪಂ ಸಿಇಒ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬಿಜಕಲ್ ಗ್ರಾಮದಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್ಲೈನ್ ಒಡೆದ ಪರಿಣಾಮ ನೀರು ಕಲುಷಿತಗೊಂಡು ವಾಂತಿ-ಬೇಧಿಗೆ ಕಾರಣವಾಗಿದೆ. ಆದರೆ, ನೀರು ಸರಬರಾಜಿಗೆ ಅಳವಡಿಸಿರುವ ಡಿಬಿಒಟಿ ಪೈಪ್ಲೈನ್ ಕಾರಣವೊ ಅಥವಾ ಜೆಜೆಎಂ ಯೋಜನೆಯಡಿ ಅಳವಡಿಸಿರುವ ಪೈಪ್ಲೈನ್ ಕಾರಣವೊ ಎಂಬುದು ಖಚಿತವಾಗಿ ಇನ್ನು ಗೊತ್ತಾಗಲಿಲ್ಲ. ಮೇಲ್ನೋಟಕ್ಕೆ ಜೆಜೆಎಂ ಗುತ್ತಿಗೆದಾರರ ಕಳಪೆ ಕಾಮಗಾರಿ ಹಾಗೂ ಇದರ ಮೇಲುಸ್ತುವಾರಿ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತದೆ. ಹೀಗಾಗಿ ಖಚಿತ ವರದಿಗಾಗಿ ಜಿಪಂ ಸಿಇಒ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುವುದು. ವರದಿ ಬಂದ ಬಳಿಕ ತಪ್ಪಿತಸ್ಥ ಗುತ್ತಿಗೆದಾರ ಅಥವಾ ಅಧಿಕಾರಿಗಳೇ ಇರಲಿ ಅವರ ವಿರುದ್ಧ ಸರ್ಕಾರ ಖಂಡಿತವಾಗಿ ಕಠಿಣ ಕ್ರಮಕೈಗೊಳ್ಳುತ್ತದೆ. ಈಗಾಗಲೇ ಗುತ್ತಿಗೆದಾರನಿಗೆ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಇಂದು ಬಿಜಕಲ್ ಗ್ರಾಮದಲ್ಲಿ ಮತ್ತೆ 6 ಹೊಸ ವಾಂತಿ ಬೇಧಿ ಪ್ರಕರಣಗಳು ಸೇರಿದಂತೆ ತಾಲೂಕಿನ ಜುಮುಲಾಪೂರ, ಸಾಸ್ವಿಹಾಳ ಗ್ರಾಮಗಳಲ್ಲೂ ವಾಂತಿ-ಬೇಧಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ ಎಂದ ಸಚಿವ ತಂಗಡಗಿ ಅವರು, ಜಿಲ್ಲೆಯಲ್ಲಿ ಯಾವುದೇ ಗ್ರಾಮವಿರಲಿ ವಾಂತಿ-ಬೇಧಿ ಪ್ರಕರಣಗಳು ಜರುಗದಂತೆ ನಿಗಾವಹಿಸಲು ಎಚ್ಚರವಹಿಸಬೇಕು. ಬಿಜಕಲ್ ಗ್ರಾಮದಲ್ಲಿ ವಾಂತಿ-ಬೇಧಿ ಸಂಪೂರ್ಣ ನಿಲ್ಲುವವರೆಗೂ ಹಾಗೂ ಬಳಿಕವೂ ಹೆಚ್ಚುವರಿ ಒಂದು ವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಮುಂದುವರೆಸುವಂತೆ
ಡಿಎಚ್’ಓ ಡಾ.ಅಲಕಾನಂದ ಮಳಗಿ ಅವರಿಗೆ ಸೂಚಿಸಿರುವುದಾಗಿ ಸಚಿವ ತಂಗಡಗಿ ಅವರು ತಿಳಿಸಿದರು.
ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಡಿಎಚ್ಒ ಡಾ.ಅಲಕಾನಂದ ಮಳಗಿ, ತಾಪಂ ಇಒ ಶಿವಪ್ಪ ಸುಬೇದಾರ, ಟಿಎಚ್ಒ ಡಾ.ಆನಂದ ಗೋಟೂರು ಇನ್ನಿತರರು ಇದ್ದರು.