ಸುದ್ದಿಮೂಲ ವಾರ್ತೆ,
ಮೈಸೂರು, ಜೂ. 16: ಬಸ್ಗಳ ಸಂಖ್ಯೆಯನ್ನು ಕಿಂಚಿತ್ತು ಹೆಚ್ಚಿಸಲಿಲ್ಲ. ಆದರೆ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮ ವಿದ್ಯಾರ್ಥಿಗಳು ಇರಲಿ.. ವಿದ್ಯಾರ್ಥಿನಿಯರೇ ಬಸ್ಗಳ ಪುಟ್ಬೋರ್ಡ್ ಮೇಲೆ ನಿಂತು ಪ್ರಯಾಣಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇದು ಶಕ್ತಿ ಯೋಜನೆ ಪರಿಣಾಮ. ಪ್ರಯಾಣ ಉಚಿತ ಎಂಬುದು ಖಚಿತವಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿನಿಯರು ನಿಗದಿತ ವೇಳೆಗೆ ಶಾಲೆ, ಕಾಲೇಜಿಗೆ ಹೋಗುವುದು ಕಷ್ಷಕರವಾಗಿದೆ. ಪ್ರಯಾಣಿಸಿದರೆ ಪುಟ್ ಬೋರ್ಡ್ ಮೇಲೆ ನಿಂತುಕೊಂಡೆ ಪ್ರಯಾಣಿಸಬೇಕಿದೆ. ಕಡಿಮೆ ಬಸ್ಗಳು ಇರುವ ಕಾರಣ ನೂಕುನುಗ್ಗಲಿನಲ್ಲೇ ಪರದಾಡಿಕೊಂಡು ತೆರಳುವ ದೃಶ್ಯ ಸಾಮಾನ್ಯವಾಗಿದೆ.
ಮೈಸೂರು ನಗರದ ಕೇಂದ್ರೀಯ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಅಗ್ರಹಾರ ವೃತ್ತ, ಮಹಾರಾಣಿ ಕಲಾ ಕಾಲೇಜು ಮೊದಲಾದ ಕಡೆಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ನೂಕುನುಗ್ಗಲಿನಲ್ಲಿ ಬಸ್ ಏರಲು ಪ್ರಯಾಸ ಪಡುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ವಿದ್ಯಾರ್ಥಿನಿಯರು ಫುಟ್ಬೋರ್ಡ್ ಮೇಲೆಯೂ ನಿಂತು ಪ್ರಯಾಣಿಸಬೇಕಾಗಿದೆ. ಬಸ್ಗಳ ಒಳಗೆ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿರುವ ಕಾರಣ ಕಂಡಕ್ಟರ್ಗಳು ಎಲ್ಲರಿಗೂ ಟಿಕೆಟ್ ನೀಡಲು ಹರಸಾಹಸ ಪಡಬೇಕಿದೆ..
‘ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಪರದಾಡಬೇಕು. ಕೆಲವೊಮ್ಮೆ ಮೊದಲ ತರಗತಿಗಳು ತಪ್ಪುತ್ತವೆ. ಪ್ರಯೋಗಾಲಯದ ತರಗತಿಗಳು ತಪ್ಪಿದರೆ ತೊಂದರೆಯಾಗುತ್ತದೆ’ ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಅಳಲು ತೋಡಿಕೊಂಳ್ಳುತ್ತಿದ್ದಾರೆ..
ತಾಲ್ಲೂಕು ಕೇಂದ್ರಗಳಲ್ಲೂ ಕೊರತೆ:
ನಂಜನಗೂಡು, ಶ್ರೀರಂಗಪಟ್ಟಣ, ತಿ. ನರಸೀಪುರ, ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಮೊದಲಾದ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಪದವಿ ಕಲಿಕೆಗೆ ಬರುವ ವಿದ್ಯಾರ್ಥಿಗಳದ್ದೂ ಇದೇ ಕಥೆ.ವ್ಯಥೆಯಾಗಿದೆ.
ಬೆಳಗ್ಗೆ ಹಾಗೂ ಸಂಜೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಕೊರತೆ ಇದೆ. ಈ ನಡುವೆ ಗ್ರಾಮೀಣ ಜನರೂ ಖಾಸಗಿ ಬಸ್ಗಳಿಂದ ಕೆಎಸ್ಆರ್ಟಿಸಿ ಬಸ್ಗಳತ್ತ ಬಂದಿದ್ದು, ಸಹಜವಾಗಿಯೇ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಜೂನ್ 11ರಿಂದ ರಾಜ್ಯದಲ್ಲಿ ಶಕ್ತಿ ಯೋಜನೆಯು ಜಾರಿಗೆ ಬಂದ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಮಾಣವು ಗಣನೀಯ ಏರಿಕೆ ಕಾಣುತ್ತಿದೆ. ಮೈಸೂರು ಘಟಕ ವ್ಯಾಪ್ತಿಯಲ್ಲಿ 1,071 ಬಸ್ಗಳಿದ್ದು, ನಿತ್ಯ ಸರಾಸರಿ 4.09 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಈ ಪ್ರಯಾಣಿಕರ ಪ್ರಮಾಣ ಶೇ 10-15ರಷ್ಟು ಹೆಚ್ಚಾಗಿದೆ. ಆದರೆ, ಬಸ್ಗಳ ಸಂಖ್ಯೆ ಮಾತ್ರ ಹೆಚ್ಚಿಲ್ಲ..
ಬಸ್ಗಳ ಹೆಚ್ಚಳವಿಲ್ಲ
ಸರ್ಕಾರ ಕೂಡಲೇ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಮಹಿಳೆಯರು ಕೂಡ ಅಗತ್ಯ ಇದ್ದರೆ ಮಾತ್ರ ಬಸ್ಗಳಲ್ಲಿ ಸಂಚರಿಸಬೇಕು. ಇಲ್ಲದಿದ್ದರೆ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಂತೆ ಆಗುತ್ತದೆ
–ರಾಜಶೇಖರ್, ಪೋಷಕರು, ವಿಜಯನಗರ ಬಡಾವಣೆ.