ಸುದ್ದಿಮೂಲ ವಾರ್ತೆ
ಮೈಸೂರು, ಸೆ.27:ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದರಂತೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಷನ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯದಲ್ಲಿ 23 ಮೆಡಿಕಲ್ ಕಾಲೇಜುಗಳಿದ್ದು ,ಉಳಿದ ಜಿಲ್ಲೆಗಳಲ್ಲಿಯೂ ಹಣಕಾಸಿನ ಲಭ್ಯತೆ ನೋಡಿಕೊಂಡು ಹೊಸ ಮೆಡಿಕಲ್ ಕಾಲೇಜು ತೆರೆಯಲಾಗುವುದು ಎಂದು ಹೇಳಿದರು.
ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭವಾಗಿದೆ ಹಾಗೂ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಗಳು ಆರಂಭವಾಗಿವೆ.ಕೆ.ಆರ್ ಆಸ್ಪತ್ರೆಯ ಸಂಪೂರ್ಣ ನವೀಕರಣ ಕಾರ್ಯ ಮುಗಿಸಲು ಜನವರಿಯವರಗೆ ಗಡುವು ನೀಡಲಾಗಿದೆ. 3 ತಿಂಗಳೊಳಗಾಗಿ ಸಂಪೂರ್ಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಹಾಗು ಅಗತ್ಯ ಉಪಕರಣಗಳನ್ನು ಒದಗಿಸಲಾಗುವುದು ಎಂದರು.
ಸೀಟುಗಳ ಸಂಖ್ಯೆ 200 ಕ್ಕೆ ಹೆಚ್ಚಳ
ಮೆಡಿಕಲ್ ಸೀಟುಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಪ್ರಸ್ತುತ ,150 ಸೀಟುಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಳ ಮಾಡಲಾಗುವುದು. ಕೇಂದ್ರದ ನೀತಿಯಂತೆ 10 ಲಕ್ಷ ಜನಸಂಖ್ಯೆಗೆ ನೂರು ಮೆಡಿಕಲ್ ಸೀಟುಗಳು ಇರಬೇಕಾಗುತ್ತದೆ. ರಾಜ್ಯದಲ್ಲಿ ಅದಕ್ಕಿಂತ ಹೆಚ್ಚಿದೆ, ಈ ಹಿಂದೆ ಇಂತಹ ನಿರ್ಬಂಧ ಇರಲಿಲ್ಲ ಇದೊಂದು ರೀತಿ ದಕ್ಷಿಣದ ರಾಜ್ಯಗಳ ವಿರುದ್ಧದ ಮಲತಾಯಿ ಧೋರಣೆ ಎಂದರು.
ಮೆಡಿಕಲ್ ಸೀಟುಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಪ್ರತಿವರ್ಷ 12 ಸಾವಿರ ಸೀಟುಗಳನ್ನು ನೀಡಲಾಗುತ್ತಿದ್ದೇವೆ ಹಾಗೂ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು ಸಾಕಷ್ಟು ಸೀಟುಗಳು ಲಭ್ಯವಿವೆ. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜು ಜ್ಞಾಪಕಾರ್ಥಕವಾಗಿ ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು 5 ಎಕರೆ ಜಾಗ ಗುರುತಿಸಲಾಗಿದ್ದು ಪ್ರಕ್ರಿಯೆ ಆರಂಭವಾಗಿದೆ ಎಂದರು.
ಇನ್ನು 3ತಿಂಗಳಲ್ಲಿ ಮೈಸೂರು ಮೆಡಿಕಲ್ ಕಾಲೇಜು ಸಮಸ್ಯೆ ಬಗೆಹರಿಸಲಾಗುವುದು ಕೂಡಲೇ 150 ರಿಂದ 200 ಉದ್ಯೋಗ ಭರ್ತಿ ಮಾಡಲಾಗುವುದು. ಶತಮಾನೋತ್ಸವ ಹಿನ್ನೆಲೆ ಆಸ್ಪತ್ರೆ ಕಟ್ಟಡ ನವೀಕರಣ ಮಾಡಲಾಗುತ್ತೆ.ಇದರಿಂದ ವೈದ್ಯಕೀಯ ಸಲಕರಣೆ ಬರಲು ತಡವಾಗುತ್ತೆ. ಜೊತೆ ಆಸ್ಪತ್ರೆಯಲ್ಲಿ ಮಗು ಕಳ್ಳತನ ಇದೆಲ್ಲದ ಬಗ್ಗೆ ನಿಗಾ ಇಡಲು ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತೆ ಎಂದು ಹೇಳಿದರು.
ರಾಮನಗರದಲ್ಲಿ ಕೆಲಸ ನಡೆಯುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಆರಂಭವಾಗಿದೆ. ಕನಕಪುರದಲ್ಲಿ ಮೆಡಿಕಲ್ ಸ್ಥಾಪನೆ ಮಾಡುವ ಬಗ್ಗೆ ಸಿಎಂ ಡಿಸಿಎಂ ಜೊತೆ ಚರ್ಚೆ ಮಾಡಲಾಗುತ್ತೆ ಎಂದರು.
ಶಾಸಕರಾದ ಹರೀಶ್ ಗೌಡ , ತಿಮ್ಮಯ್ಯ, ಸಂಸ್ಥೆಯ ನಿರ್ದೇಶಕರು ಇದ್ದರು.