ಸುದ್ದಿಮೂಲ ವಾರ್ತೆ
ಮೈಸೂರು, ನ.16: ಯತೀಂದ್ರ ಸಿದ್ದರಾಮಯ್ಯ ಅಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ವೈಎಸ್ಟಿ ಕಲೆಕ್ಸನ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಸಮಯದಲ್ಲೇ ಸಾರ್ವಜನಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
ಯತೀಂದ್ರ ಸಿದ್ದರಾಮಯ್ಯ ಈ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ತಾನು ನೀಡಿದ ಲಿಸ್ಟ್ನದ್ದು ಮಾತ್ರ ಆಗಬೇಕು ಎಂದು ತಮ್ಮ ತಂದೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
ಅಪ್ಪ-ಮಕ್ಕಳು ಮಾತನಾಡಿರುವ ಸಂಭಾಷಣೆ ವಿವರ ಹೀಗಿದೆ..
ವರುಣ ಕ್ಷೇತ್ರದ ವ್ಯಾಪ್ತಿಗೆ ಬರುವ ಟಿ.ನರಸೀಪುರ ತಾಲೂಕು ಕೀಳನಪುರ ಗ್ರಾಮದಲ್ಲಿ ನಡೆಯುತ್ತಿದ್ದ ಜನಸಂಪರ್ಕ ಸಭೆಯಲ್ಲೇ ಯತೀಂದ್ರ ಅವರು ದೂರವಾಣಿ ಕರೆ ಮಾಡಿ “ಅಪ್ಪ ಹೇಳಿ” ಅಂತ ಮಾತು ಆರಂಭಿಸುತ್ತಾರೆ. ತಾನು ನೀಡಿದ ಲಿಸ್ಟ್ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆಗ ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತುತ್ತಾರೆ. ಅದಕ್ಕೆ ಯಾರು ಎಂದು ಪ್ರಶ್ನೆ ಮಾಡಿ, ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ ಸಿದ್ಧರಾಮಯ್ಯ ಅವರು, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸುತ್ತಾರೆ. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ಮಹದೇವ್ ಯಾಕೆ ಯಾವುದು ಯಾವುದೋ ಕೊಡ್ತೀಯಾ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು ಎಂದು ಪ್ರಶ್ನೆ ಮಾಡುತ್ತಾರೆ.
ಇಲ್ಲ ಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿ ಅದು ಆರ್ಡರ್ ಆಗಬೇಕು ಅಂತ ಹೇಳುವಂತೆ ಯತೀಂದ್ರ ಅವರು ಮಹದೇವರಿಗೆ ಸೂಚಿಸಿರುವುದು ವಿಡಿಯೋದಲ್ಲಿ ಕಾಣಬಹುದು. ಇದೀಗ ಈ ವಿಡಿಯೋ ವೈರಲ್ ಆಗಿದ್ದು ಸರ್ಕಾರದ ವಿರುದ್ದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಹೀಗೆ ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಮಾತುಕತೆ ಅಪ್ಪ ಹೇಳಿ ಅಂತಾ ಮಾತು ಶುರು ಮಾಡುವ ವಿಡಿಯೋ ಈಗ ರಾಜ್ಯಾದ್ಯಂತ ವೈರಲ್ ಆಗಿ ವಿರೋಧಿ ಪಕ್ಷಗಳ ಮುಖಂಡರು ಮುಗಿ ಬಿದ್ದಿದ್ದಾರೆ.
ನನಗೇನೂ ಗೊತ್ತಿಲ್ಲ- ಸಚಿವ ಮಹದೇವಪ್ಪ
ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಹದೇವಪ್ಪ ಅವರು, ನಾನು ನೋಡು ಇಲ್ಲ. ಕೇಳೂ ಇಲ್ಲ. ನನಗೆ ಗೊತ್ತೇ ಇಲ್ಲ.. ‘ವರ್ಗಾವಣೆ ಮಾಡೋದು ಮುಖ್ಯಮಂತ್ರಿಯವರ ಪರಮಾಧಿಕಾರ’ ಎಂದು ಬರೋಬ್ಬರಿ ಆರು ಬಾರಿ ಒಂದೇ ಹೇಳಿಕೆ ಪುನರುಚ್ಛರಿಸಿದರು.
ಯಾರು ಏನೇ ಹೇಳಬಹುದು.ವರ್ಗಾವಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಆ ರೀತಿ ಪ್ರಕರಣ ನಡೆದಿದ್ದರೆ ಕಾನೂನು ತನ್ನ ಕ್ರಮ ನಿರ್ವಹಿಸುತ್ತದೆ ಎಂದು ಮಹದೇವಪ್ಪ ಹೇಳಿದರು.