ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.26: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳಿದ್ದ ನರೇಂದ್ರ ಮೋದಿ ಅವರು ಶನಿವಾರ ಬೆಳಗಿನ ಜಾವ ನೇರವಾಗಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬಳಿಕ ಅಲ್ಲಿಂದ ಪೀಣ್ಯದಲ್ಲಿರುವ ಇಸ್ರೋ ಕಮಾಂಡ್ ಕೇಂದ್ರಕ್ಕೆ ತೆರಳಿದರು.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಂದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ವೇಳೆ ಚಂದ್ರಯಾನ ಯಶಸ್ವಿಗೆ ಶ್ರಮಿಸಿದ ಎಲ್ಲಾ ವಿಜ್ಞಾನಿಗಳನ್ನೂ ಸಹ ಪ್ರಧಾನಿ ಆತ್ಮೀಯವಾಗಿ ಮಾತನಾಡಿಸಿ, ಅಭಿನಂದಿಸಿದರು.
ಬಳಿಕ ವಿಜ್ಞಾನಿಗಳನ್ನುದ್ದೇಶಿಸಿ ನರೇಂದ್ರ ಮೋದಿ ಮಾತನಾಡಿ, ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ಈ ದಿನವನ್ನು ಪ್ರತಿ ವರ್ಷ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಆಚರಿಸಲಾಗುವುದು ಎಂದು ಘೋಷಿಸಿದರು.
ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ನಾಮಕರಣ ಮಾಡಲಾಗುವುದು. ಶಿವನಲ್ಲಿ ಮಾನವಶಕ್ತಿ ರೂಪಿಸುವ ಸಂಕಲ್ಪವಿದ್ದು, ಇದು ಅಭಿವೃದ್ಧಿಯ ಸಂಕೇತ ಎಂದು ಬಣ್ಣಿಸಿದರು. ಈ ವೇಳೆ ಇಸ್ರೋ ವಿಜ್ಞಾನಿಗಳು ಸಹ ಚಪ್ಪಾಳೆ ತಟ್ಟಿ ಪ್ರಧಾನಿ ಅಭಿಪ್ರಾಯಕ್ಕೆ ಸಂತಸ ವ್ಯಕ್ತಪಡಿಸಿದರು.
ಚಂದ್ರ ಇರೋವರೆಗೂ ಭಾರತದ ಚಿಂತನೆ ಮತ್ತು ಸಾಧನೆಯ ಸಾಕ್ಷಿಯಾಗಿ ಚಂದ್ರನ ಮೇಲೆ ಶಿವಶಕ್ತಿ ರಾರಾಜಿಸಲಿದೆ. ಈ ಹೆಸರು ಮುಂದಿನ ಪೀಳಿಗೆಗೂ ಕೂಡ ಪ್ರೇರಣೆಯಾಗಲಿದೆ. ವಿಜ್ಞಾನದ ಸಾಧನೆಗಳು ಮಾನವೀಯತೆಯ ಕಲ್ಯಾಣಕ್ಕಾಗಿ ಇವೆ. ಮನುಕುಲದ ಒಳಿತು ಭಾರತದ ಶ್ರೇಷ್ಠ ಬದ್ಧತೆಯಾಗಿದೆ ಎಂದು ಮೋದಿ ಹೇಳಿದರು.
ಅದೇ ರೀತಿ ಈ ಹಿಂದೆ ಚಂದ್ರಯಾನ-2 ಸ್ಪರ್ಶಿಸಿದ ಜಾಗವನ್ನು ಕೂಡ ‘ತಿರಂಗ ಪಾಯಿಂಟ್’ ಎಂದು ಕರೆಯಲಾಗುವುದು ಎಂದು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಚಂದ್ರಯಾನ-3 ಯಶಸ್ವಿ ಕಾರ್ಯ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳಾ ವಿಜ್ಞಾನಿಗಳ ಸಾಧನೆಗೂ ಪ್ರಶಂಸೆ ವ್ಯಕ್ತಪಡಿಸಿದರು.
ಇಸ್ರೋ ವಿಜ್ಞಾನಿಗಳು ಹಲವಾರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಅವುಗಳಿಂದ ಸಾಕಷ್ಟು ಅನುಕೂಲವಾಗಿದೆ. ಕೃಷಿ, ಹವಾಮಾನ ಆಧಾರಿತ ಮಾಹಿತಿ ಜೊತೆಗೆ ಭೂಕಂಪ, ಪ್ರಾಕೃತಿಕ ವಿಕೋಪ, ಚಂಡಮಾರುತಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುವಂತಹ ಈ ಉಪಗ್ರಹಗಳಿಂದ ಮಾನವಕುಲ ಇಂದು ಅನೇಕ ಸಂಕಷ್ಟಗಳಿಂದ ಪಾರಾಗಲು ಸಾಧ್ಯವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ಭಾರತದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಮುಂಬರುವ ಕೆಲವು ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ 16 ಬಿಲಿಯನ್ ಡಾಲರ್ವರೆಗೆ ಹೂಡಿಕೆ ಏರಿಕೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ತಿಳಿಸಿದ ಪ್ರಧಾನಮಂತ್ರಿ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಾದರೆ ಆ ದೇಶ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಚಂದ್ರಯಾನ-3 ಯಶಸ್ಸಿನಿಂದಾಗಿ ಇಡೀ ದೇಶ ಹೆಮ್ಮೆಪಡುವಂತಾಗಿದೆ. ದಕ್ಷಿಣ ಧೃವಕ್ಕೆ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿರುವುದು ಇಡೀ ವಿಶ್ವವೇ ನಮ್ಮತ್ತ ನೋಡುವಂತಾಗಿದೆ ಎಂದು ಹೇಳಿದರು.
ಇದು ಸಾಧಾರಣವಾದ ಸಾಧನೆಯೇನಲ್ಲ, ಭಾರತ ಈಗ ಚಂದ್ರನಲ್ಲಿದೆ. ಯಾರೂ ತಲುಪದ ಜಾಗವನ್ನು ನಾವು ತಲುಪಿದ್ದೇವೆ. ಇಂದಿನ ಈ ಭಾರತ ಹೊಸ ಆಲೋಚನೆ, ಹೊಸ ವಿಧಾನದಲ್ಲಿ ಮುನ್ನಡೆಯುತ್ತಿದೆ. ವಿಜ್ಞಾನಿಗಳ ಈ ಸಾಧನೆ ನಿಮ್ಮೆಲ್ಲರಾ ಸಮರ್ಪಣಾ ಮನೋಭಾವ, ಪರಿಶ್ರಮ, ಧೈರ್ಯ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ನನ್ನ ನಮನಗಳು. ನಿಮ್ಮ ಈ ಸಾಧನೆಯನ್ನು ಎಷ್ಟು ಪ್ರಶಂಸಿಸಿದರೂ, ಕಡಿಮೆಯೇ ಎಂದು ಪ್ರಧಾನಿ ಹೇಳಿದರು.
ಒಂದೆಡೆ ದೇಶದ ವಿಜ್ಞಾನಿಗಳು, ಮತ್ತೊಂದೆಡೆ ಚಂದಿರನ ಅಂಗಳದಲ್ಲಿ ಪ್ರಗ್ಯಾನ್ ಪರಾಕ್ರಮವಿದೆ. ಇಡೀ ವಿಶ್ವವೇ ಇಂದು ಭಾರತದತ್ತ ಆಶ್ಚರ್ಯದಿಂದ ನೋಡುವಂತಾಗಿದೆ. ಇಂದು ಇಡೀ ವಿಶ್ವಕ್ಕೆ ಭಾರತದ ವಿಜ್ಞಾನಿಗಳು ಸ್ಫೂರ್ತಿಯಾಗಿದ್ದು, ಅವರ ಶಕ್ತಿಯನ್ನು ಅರಿತಿದೆ. ಚಂದ್ರಯಾನ-3 ಯಶಸ್ಸು, ಇಡೀ ಮಾನವ ಕುಲದ ಸಫಲತೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.
ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬಾಹ್ಯಾಕಾಶ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಹ್ಯಾಕಥಾನ್ ಪ್ರಾರಂಭಿಸಿ, ಯುವಕರಿಗೆ ಉತ್ತೇಜನ ನೀಡಲಾಗುವುದು ಎಂದು ಮತ್ತೊಂದು ಘೋಷಣೆ ಮಾಡಿದರು.
ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಮೊದಲ ಚಿತ್ರ ಪ್ರಧಾನಿಗೆ
ಪ್ರಧಾನಿ ಭೇಟಿ ವೇಳೆ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರು ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆಯು ಹೇಗೆ ನಡೆಯಿತು ಎಂಬುದರ ಪ್ರಾತ್ಯಕ್ಷಿಕೆಯನ್ನು ನೀಡಿದರು. ಈ ವೇಳೆ ವಿಕ್ರಮ್ ಲ್ಯಾಂಡರ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಮೊದಲ ಚಿತ್ರವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು. ಅವರು ಚಂದ್ರಯಾನ-2 ಆರ್ಬಿಟರ್ನಿಂದ ಸೆರೆಹಿಡಿಯಲಾದ ಚಂದ್ರಯಾನ 3 ರ ಛಾಯಾಚಿತ್ರಗಳು ಮತ್ತು ಲ್ಯಾಂಡರ್ನ ಮಾದರಿಯನ್ನುಸಹ ಪ್ರಧಾನ ಮಂತ್ರಿಗಳಿಗೆ ನೀಡಿದರು.