ಹೊಸಕೋಟೆ, ಮೇ 24: ನೈಸರ್ಗಿಕವಾಗಿ ಬೆಳೆಯುವ ಈಚಲ ಗಿಡಗಳಲ್ಲಿ ಬಿಡುವಈಚಲ ಹಣ್ಣು ಗ್ರಾಮೀಣ ಪ್ರದೇಶದಲ್ಲಿ ‘ಬಡವರ ಖರ್ಜೂರ’ ಎಂದು ಕರೆಯುತ್ತಾರೆ. ಸುಗ್ಗಿ ಸಮಯದಲ್ಲಿ ಮುಳ್ಳನ್ನು ಲೆಕ್ಕಿಸದೆ ಹಣ್ಣುಕಿತ್ತು ತಿನ್ನುವವರೇ ಹೆಚ್ಚು. ಈ ಹಣ್ಣಿನಲ್ಲಿ ಹೆಚ್ಚು ಪೌಷ್ಟಿಕತೆ ಇದೆ ಎಂದು ಹಿರಿಯರು ಹೇಳುತ್ತಾರೆ. ದಿನದಿಂದ ದಿನಕ್ಕೆ ಈಚಲು ಮರಗಳು ಕಣ್ಮರೆಯಾಗುತ್ತಿದ್ದು, ಬಹುತೇಕ ರೈತರು ಈಚಲು ಬೇಸಾಯದಿಂದ ದೂರ ಸರಿಯುತ್ತಿದ್ದಾರೆ.
ಈಚಲು ಹಣ್ಣನ್ನು ಬಯಲು ಸೀಮೆಯ ಖರ್ಜೂರ ಎಂದು ಕರೆಯುವುದು ಉಂಟು. ಬಣ್ಣದೊಂದಿಗೆ ಹಣ್ಣಾಗುವ ಈಚಲು ಹಣ್ಣು ಎಲ್ಲ ವಯೋಮಾನದವರಿಗೂ ಇಷ್ಟ. ಮಕ್ಕಳು ಖುಷಿಪಟ್ಟು ಸವಿಯುತ್ತಾರೆ. ಗ್ರಾಮೀಣ ಮಕ್ಕಳು ಬೆಳಗ್ಗೆ ಎದ್ದು ಈಚಲ ಮರದ ಕೆಳಗೆ ಉದುರಿದ ಹಣ್ಣನ್ನು ಆಯುವುದು ಸಾಮಾನ್ಯ. ಶಾಲಾ ಮಕ್ಕಳು ಶಾಲೆ ಬಿಟ್ಟ ಕೂಡಲೆ ಈಚಲು ಮರದ ಗೊಂಚಲಿಗೆ ಕಲ್ಲೆಸೆದು ಬೀಳಿಸಿ , ಹಣ್ಣು ತಿನ್ನುವುದು ಸಾಮಾನ್ಯ .
ದಶಕಗಳ ಹಿಂದೆ ಹಳ್ಳಗಳಲ್ಲಿ, ಸದಾ ನೀರು ಹರಿಯುವ ನಾಲೆಗಳ ದಂಡೆಗಳಲ್ಲಿ, ಚೌಗು ಪ್ರದೇಶ ಇರುವ ಕಡೆ ಹೇರಳವಾಗಿ ಈಚಲ ಗಿಡಗಳು ನಿಸರ್ಗದತ್ತವಾಗಿ ಬೆಳೆಯುತ್ತಿದ್ದವು.
ಇತ್ತೀಚೆಗೆ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ಈಚಲ ಗಿಡಗಳ ಸಂತತಿ ಕಡಿಮೆಯಾಗಿದೆ . ಜಿಲ್ಲೆಯ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಈಚಲ ಗಿಡಗಳು ಕಾಣಿಸಿಗುತ್ತವೆ. ಖರ್ಜೂರ ಮತ್ತು ಉತ್ತತ್ತಿ ತಳಿ ಹೋಲುವ ಈಚಲ ಗಿಡಗಳು ವಿಶಿಷ್ಟವಾಗಿದೆ .
ಈಚಲು ಗೊನೆ ಕಟಾವಿಗೆ ಬೇಕು ದೋಟಿ :
ಹಿರಿಯರು ಸಹ ದೋಟಿಯೊಂದಿಗೆ ಹೋಗಿ ಹಳದಿ ಬಣ್ಣದ ಗೊಂಚಲು ಕೊಯ್ದು ತಂದು ಒಂದು ಕಡೆ ಇಟ್ಟು ಹಣ್ಣಾದ ಮೇಲೆ ಬಿಡಿಸಿ ಮಕ್ಕಳಿಗೆ ಕೊಡುತ್ತಾರೆ. ಬಡವರು ಈ ಕಾಯಿ ಸಂಗ್ರಹಿಸಿ ಶಾಲೆಗಳ ಎದುರು ಬುಟ್ಟಿಯಲ್ಲಿ ಇಟ್ಟು ಮಾರಿ ನಾಲ್ಕು ಕಾಸು ಸಂಪಾದಿಸುತ್ತಾರೆ . ಇದರಿಂದಾಗಿ ಈ ಕಾಲ ಬಂತೆಂದರೆ ಶಾಲಾವರಣ ಈಚಲ ಬೀಜದಿಂದ ತುಂಬಿ ಹೋಗುತ್ತದೆ
ಮೇ, ಜೂನ್ ತಿಂಗಳಲ್ಲಿ ಕಟಾವು:
ಈಚಲ ಮರಗಳಲ್ಲಿ ಏಪ್ರಿಲ್ ಮತ್ತು ಮೇ ನಲ್ಲಿ ಕಾಯಿಗಳು ಗೊಂಚಲುಗಳಾಗಿ ಬಿಟ್ಟು ಹಣ್ಣಾಗಲು ಪ್ರಾರಂಭವಾಗಿ ಜೂನ್ ವೇಳೆಗೆ ಕಟಾವಿಗೆ ಸಿದ್ದಗೊಳ್ಳುತ್ತವೆ. ಈಚಲ ಹಣ್ಣು ಖರ್ಜೂರದಂತೆಯೇ ಸಿಹಿಯಾಗಿರುತ್ತವೆ. ಅಲ್ಲಲ್ಲಿ ಇರುವ ಈಚಲ ಗಿಡಗಳ ಹಣ್ಣನ್ನು ಬಿಡಿಸಿ ತಿನ್ನುವ ಖಾಯಲಿ ಅನೇಕರಿಗೆ ಇದೆ . ಈಚಲ ಕಾಯಿಗಳೆಂದರೆ ಆಡುಗಳಿಗೆ ತುಂಬಾ ಇಷ್ಟ. ಈಚಲಕಾಯಿ ಸೀಜನ್ಗಳಲ್ಲಿ ಹಿಂದೆ ಆಡುಗಳನ್ನು ಈಚಲ ವನದಲ್ಲಿ ಬಿಡಲಾಗುತ್ತಿತ್ತು. ನೈಸರ್ಗಿಕವಾಗಿ ಬೆಳೆಯುವ ಈಚಲ ಹಣ್ಣುಗಳಲ್ಲಿ ನಾನಾ ಔಷಧೀಯ ಗುಣಗಳೂ ಇವೆ ಎನ್ನುತ್ತಾರೆ ಹಿರಿಯರು .
ಮಾರುಕಟ್ಟೆಯಲ್ಲಿ ನಾನಾ ಹಣ್ಣುಗಳಿದ್ದರೂ ಈಚಲ ಹಣ್ಣು ದೊರೆಯುವುದು ತೀರ ಅಪರೂಪ ಈ ಅಪರೂಪದ ಹಣ್ಣು ಮುಂದಿನ ದಿನಗಳಲ್ಲಿ ದೊರೆಯದಿರುವ ಸಾಧ್ಯತೆಗಳನ್ನುಂತೂ ತಳ್ಳಿ ಹಾಕುವಂತಿಲ್ಲ.
ಬಹುಪಯೋಗಿ ಪರ್ಯಾಯ ವೃತ್ತಿ:
ಈಚಲ ಮರಗಳು ತೆಂಗಿನ ಮರಗಳಂತೆ ಬಹು ಉಪಯೋಗಿಯಾಗಿವೆ. ಈಚಲು ಮರದ ಗರಿ ಹಾಗೂ ಕಡ್ಡಿಯನ್ನು ತಂದು ಚಾಪೆ, ಪೊರೆಕೆ, ಬುಟ್ಟಿ ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಈಚಲು ಮರಗಳು ಕಣ್ಮರೆಯಾಗುತ್ತಿದ್ದು ಈ ಕುಟುಂಬಗಳು ಬದುಕಿಗೆ ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯವಾಗಿದೆ.
ಕುರಿ, ಮೇಕೆ, ಪಕ್ಷಿಗಳಿಗೂ ಸಹ ಆಹಾರವಾಗಿದೆ. ಗಿಳಿ, ಗೊರವಂಕ, ಇತರೆ ಪಕ್ಷಿಗಳು ಹಣ್ಣನ್ನು ಸವಿಯುತ್ತವೆ. ಕೆಲವು ಪಕ್ಷಿಗಳು ಹಣ್ಣನ್ನು ಸೇವಿಸಿ ಬೇರೊಂದು ಕಡೆ ಹೋದಾಗ ಬೀಜ ಹಾಕುವ ಮೂಲಕ ಅಲ್ಲಿಯೂ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಈಚಲ ಮರಗಳಿಂದ ಸೇಂದಿ ತಯಾರಿಸಲಾಗುತ್ತಿತ್ತು. ಈಗ ನಿಷೇಧ ಹೇರಲಾಗಿದೆ .
ಕೋಟ್…
ಈಚಲು ಮರದ ಗೊನೆಯತ್ತ ಕಲ್ಲು ಬೀಸಿ ಹಣ್ಣು ಉದುರಿಸಿ ನಾವು ತಿಂದು ಗೆಳೆಯರಿಗೂ ಕೊಡುತ್ತಿದ್ದ ದೃಶ್ಯ ಇ೦ದಿಗೂ ನೆನಪಿದೆ. ಎಷ್ಟೋ ಬಾರಿ ಹಣ್ಣು ತಿನ್ನಲು ಬರಿಗಾಲಲ್ಲಿ ಹೋಗಿ ಮುಳ್ಳು ತುಳಿದು ಪೋಷಕರಿಂದ ಬೈಸಿಕೊಂಡಿದ್ದು, ಹೊಡೆತ ತಿಂದಿದ್ದು ಉಂಟು. ಕೆಲವರು ಈಚಲ ಹಣ್ಣನ್ನು ಶಾಲೆಗಳ ಹತ್ತಿರ ಮಾರಾಟ ಮಾಡಲು ಬರುತ್ತಿದ್ದರು. ಇಂದಿನ ಯುವ ಪೀಳಿಗೆ ಇಂತಹ ಹಣ್ಣುಗಳನ್ನು ಸವಿಯುವುದು ಕಡಿಮೆಯಾಗಿದೆ.
– ಮಂಜುನಾಥ್, ದೊಡ್ಡಕೋಲಿಗ