ನೀವೇನಾದರು ನಿಂಬೆಹಣ್ಣಿನ ಪ್ರಿಯರಾಗಿದ್ದರೆ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ. ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. ಬೇಸಿಗೆ ಆಗಿರುವುದರಿಂದ ಕಳೆದ 2 ತಿಂಗಳಿಂದ ನಿಂಬೆಹಣ್ಣು ಕೊಳ್ಳುವವರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಮೇ ಮುಕ್ತಾಯ ಹಂತದಲ್ಲಿದ್ದರೂ ಬೆಲೆ ಮಾತ್ರ ಇಳಿಕೆಯಾಗಿಲ್ಲ.
ಬಿರುಬಿಸಿಲು ಹೆಚ್ಚಿದ್ದು, ಜನರಿಗೆ ಬಾಯಾರಿಕೆ ಸಹ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಜನರು ಎಳನೀರು, ತಂಪು ಪಾನೀಯ, ನಿಂಬೆ ಶರಬತ್ ಪಾನೀಯಗಳನ್ನು ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಶರಬತ್, ವಿವಿಧ ಆಹಾರ ತಯಾರಿಕೆ, ಪಾನೀಯ ಮಾಡಲು ನಿಂಬೆ ಹಣ್ಣು ಬೇಕೇಬೇಕು. ಈ ಹಿನ್ನೆಲೆಯಲ್ಲಿ ನಿಂಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಹಾಗೂ ಚಿಲ್ಲರೆ ವ್ಯಾಪಾರದಲ್ಲೂ ಹೆಚ್ಚಾಗಿದ್ದು ಹೆಚ್ಚುಹೆಚ್ಚು ಖರೀದಿಸುತ್ತಿದ್ದ ಜನರು ಈಗ ಕಡಿಮೆ ನಿಂಬೆ ಖರೀದಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ಮಂತ್ರ ತಂತ್ರಗಳಿಗೆ ಬಹು ಬೇಡಿಕೆ:
ಸಿಟ್ರಸ್, ಆವ್ರಾಂಟಿ ಫೋಲಿಯಾ ಎಂಬುದು ಇದರ ವೈಜ್ಞಾನಿಕ ಹೆಸರು. ಇಂಗ್ಲಿಷಿನಲ್ಲಿ ಆಸಿಡ್ ಲೈಮ್ ಎನ್ನುತ್ತಾರೆ. ನಿಂಬೆಯು ಬಹು ಉಪಯೋಗಿ ಹಣ್ಣು ಬಿಸಿಲಿನಲ್ಲಿ ತಂಪು ಕೊಡುವ ಈ ಹಣ್ಣು ಮಂತ್ರ ತಂತ್ರಗಳಲ್ಲಿ ಉಪಯೋಗವಾಗುತ್ತದೆ. ಹಿರಿಯರಿಗೆ, ಅತಿಥಿಗಳಿಗೆ ನಿಂಬೆಹಣ್ಣು ಕೊಡುವ ಸಂಪ್ರದಾಯ ನಮ್ಮಲ್ಲಿದೆ.
ಎಷ್ಟಿದೆ ಬೆಲೆ?
ಮಾರುಕಟ್ಟೆಯಲ್ಲಿ 1000 ನಿಂಬೆಹಣ್ಣಿನ ಬೆಲೆ 4,000-5,500 ರೂ.ವರೆಗೆ ತಲುಪಿದೆ. ಈ ಹಿಂದೆ ದರ 2,500- 3, 000 ರೂ. ವರೆಗೆ ಇತ್ತು. ಆದರೆ ಬೇಸಿಗೆ ಬಂತೆಂದರೆ ದಿಢೀರನೆ ನಿಂಬೆ ಹಣ್ಣಿನ ದರ ಹೆಚ್ಚಾಗಿದ್ದು, ಚಿಲ್ಲರೆ ವ್ಯಾಪಾರಸ್ಥರು ಸಾಗಾಟ ವೆಚ್ಚ ಹಾಗೂ ಸವಕಲು ಸೇರಿದಂತೆ ವಿವಿಧ ವೆಚ್ಚ ಸೇರಿಸುವುದರಿಂದ ಹಣ್ಣು 7- 8 ರೂಪಾಯಿ ತನಕ ಮಾರಾಟವಾಗುತ್ತಿದೆ .
ಚಿಲ್ಲರೆ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ದರ 10 ರೂ. ಗೆ ಚಿಕ್ಕ ಗಾತ್ರದ 2 ನಿಂಬೆಹಣ್ಣು ಸಿಗುತ್ತಿವೆ. ಉತ್ತಮ ಗಾತ್ರದ ನಿಂಬೆ ಹಣ್ಣು 20 ರೂ.ಗೆ 3 ಹಣ್ಣು ನೀಡಲಾಗುತ್ತದೆ. ಇದರಿಂದ ಗ್ರಾಹಕ ಮಾರುಕಟ್ಟೆಗೆ ಹೋದರೆ ನಿಂಬೆಹಣ್ಣು ಖರೀದಿಗೆ ಹಿಂಜರಿಯುವಂತಾಗಿದೆ.
ಹವಾಮಾನ ವೈಪರೀತ್ಯದಿಂದ ನಿಂಬೆ ಬೆಳೆ ಕಡಿಮೆ ಇಳುವರಿ ಬರುತ್ತಿರುವುದರಿಂದ ಮಾರುಕಟ್ಟೆಗೆ ಅವಕ ಕಡಿಮೆಯಾಗಿದೆ. ಅಲ್ಲದೆ, ಬೇಸಿಗೆ ಹೆಚ್ಚಾಗಿ ದ್ದರಿಂದ ಖರೀದಿ ಭರಾಟೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ ನಿಂಬೆ ತಕ್ಷಣ ಖಾಲಿ ಆಗುತ್ತಿದ್ದು, ಬೆಲೆಯೂ ಹೆಚ್ಚಾ ಗಲು ಒಂದು ಕಾರಣ ಎನ್ನುತ್ತಾರೆ ನಿಂಬೆಹಣ್ಣು ವ್ಯಾಪಾರಿಗಳು.
ಕೋಟ್..
ಬೇಸಿಗೆಯ ಸಂದರ್ಭದಲ್ಲಿ ನಿಂಬೆ ಹಣ್ಣು ಖರೀದಿಸಲು ಆಗುತ್ತಿಲ್ಲ. ಮಳೆಗಾಲದಲ್ಲಾದರೆ 10 ರೂ. ಗೆ 5 ಹಣ್ಣು ಸಿಗುತ್ತಿದ್ದವು. ಆದರೆ ಈಗ 10 ರೂ. ಕೊಟ್ಟರೆ ಮಧ್ಯಮ ಗ್ರಾತ್ರದ ಒಂದು ಅಥವಾ ಸಣ್ಣ ಗಾತ್ರದ ಎರಡೇ ನಿಂಬೆ ಸಿಗುತ್ತಿದೆ. ವಿಧಿ ಯಿಲ್ಲದೆ ಖರೀದಿಸುವಂತಾಗಿದೆ.
– ನಂದೀಶ್, ಗ್ರಾಹಕ
ಕೋಟ್..
ಬೇಸಿಗೆಯಲ್ಲಿ ಪಾನೀಯಗಳಿಗೆ ಹೆಚ್ಚು ಮೊರೆ ಹೋಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚಾಗಿದೆ. ನಾವು ಅನಿವಾರ್ಯವಾಗಿ ವ್ಯಾಪಾರ ಮಾಡಬೇಕಿರುವುದರಿಂದ ಒಂದೇ ಬಾರಿ ಹೆಚ್ಚು ಹಣ್ಣು ಖರೀದಿಸುತ್ತೇವೆ. ಇದರಿಂದ ಸ್ವಲ್ಪ ಅನುಕೂಲ ಆಗಲಿದೆ.
– ಅಲ್ಪಖಾನ್, ಜ್ಯೂಸ್ ವ್ಯಾಪಾರಿ