ಸುದ್ದಿಮೂಲ ವಾರ್ತೆ
ರಾಯಚೂರು,ಮೇ.2: ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಹುತೇಕರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಾಗಿದ್ದಾರೆ.
ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೊಹ್ಮದ್ ಶಾಲಂ ಗೆ ಘೋಷಣೆ ಬಳಿಕ ಮೌನವಾಗಿ ತೆರೆಮರೆಗೆ ಸರಿದಿದ್ದ ಅಸ್ಲಾಂ ಪಾಷಾ , ಡಾ.ರಜಾಕ್ ಉಸ್ತಾದ್, ಅಬ್ದುಲ್ ಕರಿಂ ಸೇರಿದಂತೆ ಬಹುತೇಕರು ಕಾಂಗ್ರೆಸ್ ಪರ ಬಹಿರಂಗ ಪ್ರಚಾರಕ್ಕಿಳಿದಿದ್ದಾರೆ.
ಸೈಯದ್ ಯಾಸಿನ್ ಹೊರತುಪಡಿಸಿ ಬಹುತೇಕರು ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಗೆಲುವಿಗೆ ಒಂದಾಗಿ ಬಹಿರಂಗ ಪ್ರಚಾರದ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಮುಜಿಬುದ್ದಿನ್ ಗೆ ಒಂದೇ ಒಂದು ಓಟು ಹಾಕಿದರೆ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಗೆಲ್ಲಿಸಿದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಮುಖಂಡ ರವಿ ಭೋಸರಾಜ್ ದಲಿತರು ಮತ್ತು ಮುನ್ನೂರು ಕಾಪು ಸಮಾಜದ ವೋಟುಗಳು ಹೆಚ್ಚಾಗಿ ಪಡೆಯಲು ಕಳೆದ ಎರಡು ದಿನಗಳಿಂದ ಹಗಲಿರುಳು ಆ ಬಡಾವಣೆಗಳ ಮುಖಂಡರ ಭೇಟಿ ಮಾಡಿ ಮಾತುಕತೆ ನಡೆಸತೊಡಗಿದ್ದಾರೆ.
ಇದರ ಜೊತೆಗೆ ಇತರೆ ಸಮುದಾಯದ ಮುಖಂಡರ ವಿಶ್ವಾಸಕ್ಜೆ ತೆಗೆದುಕೊಂಡು ರಾಜ್ಯ ಮಟ್ಟದ ತಮ್ಮ ಕೈ ಮುಖಂಡರಿಂದ ಹೇಳಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದಾರೆ.
ಮೊನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಅವರಿಂದಲು ಕೆಲವರಿಗೆ ಫೋನ್ ಮಾಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದ್ದು ತಾವು ಬೆಂಬಲಿಸಿದರೆ ಮುಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆಲಸ ಮಾಡಿಕೊಡುವ ಭರವಸೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ 35 ವಾರ್ಡ್ ಗಳ ಮತ್ತು 14 ಹಳ್ಳಿಗಳಲ್ಲಿ ಕಾಂಗ್ರೆಸ್ ಮತಗಳು ಗಟ್ಟಿ ಮಾಡಿಕೊಳ್ಳಲು ಬೂತ್ ಮಟ್ಟದಲ್ಲಿ ಕೆಲಸದ ಜವಾಬ್ದಾರಿ ಹೊರಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಮತ್ತು ಕೆಲ ಪಕ್ಷೇತರ ಸದಸ್ಯರಿಗೆ ಆಯಾ ವಾರ್ಡ್ ನಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳು ಗಳಿಸುವ ರೀತಿಯಲ್ಲಿ ಕೆಲಸ ಮಾಡಬೇಕು.ಇದಕ್ಕಾಗಿ ಕಾಂಗ್ರೆಸ್ ನಗರಸಭಾ ಸದ್ಯರಿಗೆ ಗುರಿ ನೀಡಲಾಗಿದೆ ಎನ್ನಲಾಗಿದೆ.
ಒಟ್ಟಾರೆ, ಬಿಜಪಿಯನ್ಬು ನಗರ ಕ್ಷೇತ್ರದಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ಎಲ್ಲಾ ತಂತ್ರಗಾರಿಕೆ ನಡೆಸುತ್ತಿದ್ದು ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುದು ಕಾದು ನೋಡಬೇಕಿದೆ