ಸುದ್ದಿಮೂಲ ವಾರ್ತೆ
ಚೇಳೂರು, ನ. 15 : ತಾಲೂಕಿನ ಪಂಚಾಯಿತಿಗೆ ಸೇರಿದ ನಿಮ್ಮಕಾಯಲಪಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ನಿಂತು ಜನ ಸಾಮಾನ್ಯರು ಓಡಾಡಲು ಆಗದೆ ತೊಂದರೆ ಅನುಭವಿಸುವಂತಾಗಿದೆ.
ಚರಂಡಿ ಮುಚ್ಚಿ ಹಾಕಿದ ಕಾರಣ ನೀರು ರಸ್ತೆಗೆ ಬರುತ್ತಿದೆ. ಕೆಲ ತಿಂಗಳುಗಳಿಂದ ರಸ್ತೆಯಲ್ಲೇ ನೀರು ನಿಂತು ದುರ್ವಾಸನೆ ಬರುತ್ತಿದ್ದು ಸುತ್ತಮುತ್ತಲಿನ ಜನರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಸರಿಪಡಿಸಲು ಮುಂದಾಗುತ್ತಿಲ್ಲಾ. ಇದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಕ್ಕದ ಶಿಡ್ಲಘಟ್ಟ ತಾಲೂಕು ತಲಕಾಯಲ ಬೆಟ್ಟದಲ್ಲಿ ಕಳೆದ ವಾರ ಅಷ್ಟೇ ಝೀಕಾ ವೈರಸ್ ಪತ್ತೆ ಆಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ವಚ್ಛತೆಯನ್ನು ಕಾಪಾಡಲು ಗ್ರಾಮ ಪಂಚಾಯ್ತಿಗಳಿಗೆ ತಿಳಿಸಿತ್ತು. ಆದರೆ ಯಾವ ಗ್ರಾಮ ಪಂಚಾಯಿತಿಯೂ ಈ ಕಾರ್ಯಕ್ಕೆ ಕೈ ಹಾಕಿಲ್ಲ. ಜಿಲ್ಲಾಡಳಿತದ ಈ ಸೂಚನೆ ಬರೀ ಮಾತಿಗಷ್ಟೇ ಸೀಮಿತವಾಯಿತಾ ಎಂಬ ಪ್ರಶ್ನೆ ಮೂಡುತ್ತದೆ. ವಿಪರ್ಯಾಸವೆಂದರೆ ಗ್ರಾಮ ಪಂಚಾಯ್ತಿ ಸದಸ್ಯರ ಮನೆಯ ಮುಂದೆಯೇ ಈ ರೀತಿ ನೀರು ನಿಂತಿದ್ದರೂ ಸುಮ್ಮನಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕಿನ ಹಲವು ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ಇದೆ ಪರಿಸ್ಥಿತಿ ಇದೆ. ಯಾವ ಗ್ರಾಮಕ್ಕೆ ಹೋದರು ನಡು ರಸ್ತೆಯಲ್ಲೇ ನೀರು ನಿಂತು ಪಾಚಿ ಕಟ್ಟಿ ಕೊಳೆತು ದುರ್ವಾಸನೆಯಿಂದ ಕೆಟ್ಟ ಇಂಗಾಲಾಮ್ಲವು ಉತ್ಪತ್ತಿಯಾಗಿ ಗಾಳಿಯಲ್ಲಿ ಸೇರುತ್ತದೆ. ಅದೇ ಗಾಳಿಯನ್ನ ಜನರು ಉಸಿರಾಡಬೇಕಾಗುತ್ತದೆ. ಇದರಿಂದ ತೊಂದರೆಯಾಗಲಿದೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು.
ಅಲ್ಲದೆ, ಸೊಳ್ಳೆಗಳು ಹುಟ್ಟಿಕೊಂಡು ಪರಿಣಾಮ ಗ್ರಾಮಗಳಲ್ಲಿ ಡೆಂಗ್ಯೂ, ಮಲೇರಿಯಾ ಅಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಆರೋಗ್ಯವೇ ಮಹಾ ಭಾಗ್ಯ
ಮನುಷ್ಯನಿಗೆ ಅರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಸ್ವಚ್ಛತೆಯಿಂದ ಕೂಡಿರದ ಗ್ರಾಮಗಳಲ್ಲಿ ಅರೋಗ್ಯವಾಗಿರಲು ಹೇಗೆ ಸಾಧ್ಯ. ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಹಳ್ಳಿಗಳ ಕಡೆ ಬಂದು ಇಂತಹ ಸಮಸ್ಯೆಗಳನ್ನ ಆಲಿಸಬೇಕು.