ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತೀ ಮುಖ್ಯವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಭಿಪ್ರಾಯಪಟ್ಟರು.ಅವರು ಇಂದು ಮಂಡ್ಯ ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ವಿತರಕರ ವಿವಿದ್ದೊದ್ದೇಶ ಸಹಕಾರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೀನ ದಲಿತರ, ದುರ್ಬಲರ, ಅಸಹಾಯಕರ, ನಿರ್ಗತಿಕರ ಬಗ್ಗೆ ವಿಶೇಷವಾದ ಸಾಮಾಜಿಕ ಕಾಳಜಿ ಇಟ್ಟುಕೊಂಡು ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವವರು ನಿಜವಾದ ಪತ್ರಕರ್ತರು ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರಜಾಪ್ರಭುತ್ವ ಆಧಾರ ಸ್ತಂಭಗಳು, ಆದರೆ ಈ ಮೂರು ಸ್ತಂಭಕ್ಕೂ ಆಧಾರ ಸ್ತಂಭ ಹಾಗೂ ಪ್ರಜಾಪ್ರಭುತ್ವದ ಬಹುದೊಡ್ಡ ನಾಲ್ಕನೇ ಸ್ತಂಭ ಪತ್ರಿಕಾರಂಗ. ಈ ನಿಟ್ಟಿನಲ್ಲಿ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎನ್ನುವುದನ್ನು ವಿಶ್ಲೇಷಣೆ ಮಾಡುವ ಜವಾಬ್ದಾರಿ ಪತ್ರಿಕೆ ಹಾಗೂ ಪತ್ರಕರ್ತರ ಮೇಲಿದೆ ಎಂದರು.
ಪತ್ರಕರ್ತರಲ್ಲಿ ಆರೋಗ್ಯಕರವಾದ ಚಿಂತನೆ ಹಾಗೂ ಆರೋಗ್ಯಕರವಾದ ಮನಸ್ಸು, ದೇಹ ಇರಬೇಕು ಆವಾಗ ಮಾತ್ರ ಪತ್ರಿಕೆಯ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ ಎಂದರು.
ಸರ್ಕಾರಿ ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಕೆಲಸ ಮಾಡುತ್ತಾರೆ ಹಾಗಾಗಿ ಅವರದ್ದು ಕೆಲಸವೇ ಹೊರತು ಸೇವೆಯಲ್ಲ. ನಿಜವಾಗಿಯೂ ಸಾರ್ವಜನಿಕರ ಸೇವೆ ಎಂದರೆ ಪತ್ರಕರ್ತರ ಕೆಲಸ. ಜೊತೆಗೆ ಪತ್ರಕರ್ತರ ಬರವಣಿಗೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಮಾಜಿಕ ಗುಣ ಇರುತ್ತದೆ. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಬರಹದ ಮೂಲಕ ನ್ಯಾಯಸಿಗುತ್ತದೆ ಎಂದರು.
ಜೂನ್ 1 ವಿಶೇಷವಾದ ದಿನ ಪತ್ರಕರ್ತರ ದಿನ, ವೈದ್ಯರ ದಿನ, ವರ್ಷದ ಹೊಸ ಕಂದಾಯ ದಿನ ಹಾಗೂ ವಿಶೇಷವಾಗಿ ಮಂಡ್ಯ ಜಿಲ್ಲೆ ರಚನೆಯಾದ ದಿನ ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಾದ ಎಸ್ ಹೆಚ್ ನಿರ್ಮಲ ಅವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪತ್ರಕರ್ತರು ಪತ್ರಿಕೆಗಳ ಮೂಲಕ ಶ್ರೀಸಾಮಾನ್ಯರಿಗೆ ತಲುಪಿಸುತ್ತಾರೆ. ಅದನ್ನು ಸಾಮಾನ್ಯರು ಓದಿದಾಗ ಮಾತ್ರ ಅದರ ಪ್ರಯೋಜನ ಪಡೆದುಕೊಂಡಂತಾಗುತ್ತದೆ ಎಂದರು.
ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಸರ್ಕಾರದಲ್ಲಿನ ಯೋಜನೆಗಳ ಮಾಹಿತಿ ಇರುತ್ತವೆ. ಅದನ್ನೆಲ್ಲಾ ತಿಳಿದುಕೊಂಡು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ ಜೋಗಿಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಸಿ ಮಂಜುನಾಥ್, ಮಾಜಿ ಅಧ್ಯಕ್ಷರಾದ ಕೌಡ್ಲೆ ಚೆನ್ನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.