ಹೊಸಕೋಟೆ, ಜೂ 20 : ಗಾಂಜಾ ಮಾರಾಟಕ್ಕೆ ನಿಷೇಧ ಹೇರಿದ್ದರು ತಾಲೂಕಿನಲ್ಲಿ ತೆರೆಮರೆಯಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ನಿರ್ಜನ ಪ್ರದೇಶಗಳಲ್ಲಿ ಮಾದಕ ಪದಾರ್ಥ ಸೇವನೆ ನಿರಾತಂಕವಾಗಿ ಮುಂದುವರಿಯುತ್ತಿದೆ. ವಿಶೇಷವಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಈ ವಿಷಜಾಲಕ್ಕೆ ತುತ್ತಾಗುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳೇ ಗಾಂಜಾ ಜಾಲಕ್ಕೆ ಬಲಿಯಾಗುತ್ತಿದ್ದು, ತರಗತಿ ಅವಧಿಯಲ್ಲೇ ನಗರ ಪ್ರದೇಶಗಳ ಹೊರವಲಯಗಳಲ್ಲಿ ಯುವಕರು ನಶೆಯಲ್ಲಿ ತೇಲಾಡುವ ದೃಶ್ಯಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಿವೆ.
ಶೈಕ್ಷಣಿಕ ಸಂಸ್ಥೆಗಳ ಸಮೀಪದಲ್ಲೇ ತೆರೆದಿರುವ ಟೀ ಸ್ಟಾಲ್ಗಳಲ್ಲಿ ಸಿಗರೇಟ್ ನಿಂದ ಆರಂಭವಾಗಿ ಗಾಂಜಾ ಮಾರಾಟದವರೆಗೆ ವಿಷಜಾಲ ವಿಸ್ತರಣೆ ಕಂಡಿದ್ದು, ಯುವಜನಾಂಗ ಬಲಿಯಾಗುತ್ತಿದೆ. ದೊಡ್ಡಬಳಾಪುರ, ಹೊಸಕೋಟೆ, ನೆಲಮಂಗಲ ನಗರ ಪ್ರದೇಶಗಳಲ್ಲಿ ಕೆಲ ಪ್ರತಿಷ್ಠಿತ ಶಾಲಾ, ಕಾಲೇಜುಗಳನ್ನು ಗುರಿಯಾಗಿಸಿಕೊಂಡಿರುವ ಗಾಂಜಾ ಪೂರೈಕೆದಾರರು ಜಾಲ ವಿಸ್ತರಿಸಿದ್ದಾರೆ.
ಮುಖ್ಯವಾಗಿ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ, ನೆಲಮಂಗಲ- ದೊಡ್ಡಬಳ್ಳಾಪುರ ರಸ್ತೆಯ ಖಾಸಗಿ ವಿವಿಗಳ ವಿದ್ಯಾರ್ಥಿಗಳಿಗೆ ಈ ಜಾಲದಿಂದ ಪೂರೈಕೆ ನಿರಾತಂಕವಾಗಿ ಮುಟ್ಟಿತ್ತಿದೆ. ಜತೆಗೆ, ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಗಾಂಜಾ ಘಮಲು ಅವ್ಯಾಹತವಾಗಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತು, ಈ ವಿಷಜಾಲಕ್ಕೆ ಬ್ರೇಕ್ ಹಾಕಬೇಕಿದೆ.
ಊರಾಚೆ ಪಾರ್ಟಿಗಳು: ಶಾಲಾ- ಕಾಲೇಜು ಅವಧಿಯಲ್ಲೇ ಬಹುತೇಕ ವಿದ್ಯಾರ್ಥಿಗಳು ನಗರ ಪ್ರದೇಶದ ಹೊರವಲಯಗಳಿಗೆ ತೆರಳುತ್ತಿದ್ದು, ಮಾದಕ ಪದಾರ್ಥ ಪೂರೈಕೆದಾರರು ಇವರನ್ನು ಸೆಳೆದು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಶಾಲಾ, ಕಾಲೇಜಿಗೆ ರಜೆ ಹಾಕಿ, ಅದೇ ವೇಳೆ ಹೊರವಲಯಗಳಲ್ಲಿ ಪಾರ್ಟಿ ನಡೆಸುವ ಈ ಯುವಕರ ಪಡೆ ತಮ್ಮ ಅಮೂಲ್ಯ ಭವಿಷ್ಯವನ್ನು ಕಳೆದುಕೊಳ್ಳುತ್ತಿದೆ. ಜತೆಗೆ, ಕೆಲವೆಡೆ ಸಂಜೆ ನಿರ್ಜನ ಪ್ರದೇಶಗಳಲ್ಲಿ ಕುಳಿತು ಗಾಂಜಾ ನಶೆಯಲ್ಲಿ ತೇಲುವ ದೊಡ್ಡ ಪಡೆಯೇ ಸೃಷ್ಟಿಯಾಗುತ್ತಿದ್ದು, ಪೊಲೀಸರು ತಮ್ಮ ಗಸ್ತು ಹೆಚ್ಚಳ ಮಾಡಬೇಕಿದೆ. ಜತೆಗೆ, ಎಲ್ಲಾ ನಗರ, ಗ್ರಾಮಗಳಲ್ಲಿ ಬೀಟ್ ಪೊಲೀಸಿಂಗ್ ಪುನಾರಂಭಿಸಬೇಕಿದೆ.
ವಿಸ್ತರಿಸಲಿ ಸೆನ್ ಕಾರ್ಯಾಚರಣೆ:
ರಾಜ್ಯದಲ್ಲಿ ಮಾದಕ ಪದಾರ್ಥಗಳ ಪೂರೈಕೆ, ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೊಂದು ಸೆನ್ ಪೊಲೀಸ್ ಠಾಣೆ ತೆರೆಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂಸನ್ ಪೊಲೀಸ್ ಠಾಣೆ ಆರಂಭಗೊಂಡಿದ್ದು ಇದು ಬೆಂಗಳೂರು ನಗರಕ್ಕೆ ಸೀಮಿತವಾದಂತಿದೆ. ಗಾಂಜಾ, ಮಾದಕ ಪದಾರ್ಥಗಳ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಅನಿವಾರ್ಯವಾಗಿದೆ.
ಕೋಟ್
ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿಗಳು ಸಂಪೂರ್ಣ ಬದಲಾಗಿದ್ದು, ಮಾದಕ ಪದಾರ್ಥಗಳ ದಾಸರಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ವಿಶೇಷ ನಿಗಾ ವಹಿಸಬೇಕಾಗುತ್ತದೆ.
-ಸಿದ್ದರಾಮಯ್ಯ, ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ನಂದಗುಡಿ.
ಪೋಷಕರು ಮಕ್ಕಳ ಚಟುವಟಿಕೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಡ್ರಗ್ಸ್ ತೆಗೆದುಕೊಳ್ಳುವವರ ಕಣ್ಣು ಕೆಂಪಾಗಿರುತ್ತದೆ. ಸಿಡುಕು, ಒಂಟಿತನ, ವರ್ತನೆಯಲ್ಲಿ ಬದಲಾವಣೆ ಇರುತ್ತದೆ. ಇಂತಹ ಲಕ್ಷಣ ಕಂಡು ಬಂದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೆ ಮುಂದಾಗಬೇಕು. ಆರಂಭದಲ್ಲಿ ವ್ಯಸನವನ್ನು ಪತ್ತೆ ಹಚ್ಚಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಆಗಾಗ ಕಾರ್ಯಾಗಾರ ನಡೆಸಲಾಗುತ್ತಿದೆ.
-ಡಾ. ಗಿರೀಶ್ಕುಮಾರ್ ಡಿ.ಪಿ., ಮನಶಾಸ್ತ್ರಜ್ಞ
ಜಿಲ್ಲಾ ಪೊಲೀಸ್ ಇಲಾಖೆಯಿಂದ ಈಗಾಗಲೇ ಜಿಲ್ಲೆಯಾದ್ಯಂತ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗು ತ್ತಿದ್ದು, ಶಾಲಾ, ಕಾಲೇಜುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.
-ಮಲ್ಲಿಕಾರ್ಜುನ ಬಾಲದಂಡಿ ಜಿಲ್ಲಾ ವರಿಷ್ಠಾಧಿಕಾರಿ, ಬೆಂಗಳೂರು ಗ್ರಾಮಾಂತರ