ಸುದ್ದಿಮೂಲ ವಾರ್ತೆ
ಮೈಸೂರು, ಅ.1:ಸ್ವಚ್ಚ ದಿವಸ್ ಆಚರಣೆ ಅಂಗವಾಗಿ ಭಾನುವಾರ ನಡೆದ ಸ್ವಚ್ಚತಾ ಆಂದೋಲನ ಮೈಸೂರು ಜಿಲ್ಲೆಯಲ್ಲಿ ಯಶಸ್ವಿ ನಡೆಯಿತು. ಇದರ ಅಂಗವಾಗಿ ಶ್ರಮದಾನದಲ್ಲಿ ಉಲ್ಲಾಸ, ಉತ್ಸಾಹದಿಂದ ಸಾವಿರಾರು ಮಂದಿ ಕೈಜೋಡಿಸಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವಚ್ಛತಾ ಆಂದೋಲಕ್ಕೆ ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಚಾಲನೆ ನೀಡಿದರು. ಕಚೇರಿಯ ಪ್ರಾಂಗಣದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳಿಂದ ಶ್ರಮದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಕಛೇರಿಗಳಲ್ಲಿ ಸ್ವಚ್ಛತೆ ಕಾಪಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಿ ಎನ್ನುವ ಉದ್ದೇಶದೊಂದಿಗೆ ಶ್ರಮದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾದ್ಯಂತ ಶಾಲೆಗಳಲ್ಲಿ ಶ್ರಮದಾನ ನಡೆಯಿತಲ್ಲದೇ, ಸ್ವಪ್ರೇರಣೆಯಿಂದ ಮಕ್ಕಳು, ಸಂಘಟನೆಗಳ ಕಾರ್ಯಕರ್ತರು ಮತ್ತು ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಶ್ರಮದಾನ ಮಾಡಿದರು. ಉದ್ಯಾನವನ, ಶಾಲಾ ಆವರಣ, ಕಚೇರಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಕಸ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಸಾಗಿಸಿದರು.
ವಂದೇ ಮಾತರಂ ರೈಲಿನಲ್ಲಿ
ಮೈಸೂರು ರೈಲು ನಿಲ್ದಾಣದಲ್ಲಿ “ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್” ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್, ಇತರ ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ ಮತ್ತು ‘ಬ್ರಹ್ಮಕುಮಾರಿ’ ಮತ್ತು ಇತರ ಸಂಸ್ಥೆಗಳ ಸ್ವಯಂಸೇವಕರುಗಳ ಜೊತೆ ಈ ಶ್ರಮದಾನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ಕಾರ್ಯಕ್ರಮವು ಮೈಸೂರು ವಿಭಾಗದಲ್ಲಿ ಅ.2 ರವರೆಗೆ ನಡೆಯಲಿದೆ.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಲೋಹಿತೇಶ್ವರ ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಶ್ರಮದಾನ
ಮೈಸೂರಿನ ಮಂಡಿ ಮೊಹಲ್ಲಾ ದಲ್ಲಿರುವ ಟಿ ಬಿ ಆಸ್ಪತ್ರೆ ಅರಳಿಕಟ್ಟೆ ಆವರಣದಲ್ಲಿ ಬಿಜೆಪಿ 24 ನೇ ವಾರ್ಡಿನ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾಜಿ ಶಾಸಕ ಎಲ್ ನಾಗೇಂದ್ರ ಮಾತನಾಡಿ, ಸ್ವಚ್ಚತಾ ಕಾರ್ಯಕ್ರಮಗಳು ನಾಮಕಾವಸ್ಥೆಗೆ ನಡೆಯದೇ ವಾರಕ್ಕೊಮ್ಮೆ ಕಡ್ಡಾಯವಾಗಿ ಜರುಗಬೇಕು. ಪ್ರಧಾನಿ ನರೇಂದ್ರ ಮೋದಿ ಕರೆಗೆ ಪ್ರತಿಯೊಂದು ವಾರ್ಡಿನಲ್ಲೂ ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ರುವುದು ಸಂತೋಷವಾಗಿದೆ. ಈ ಸ್ವಚ್ಛತಾ ಕಾರ್ಯಕ್ರಮಗಳನ್ನು ನಿರಂತರಗೊಳಿಸಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಮೇಶ್,ವಾರ್ಡ್ ಅಧ್ಯಕ್ಷರಾದ ಕೇಬಲ್ ವಿಜಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹೇಮಾ ಸಂತೋಷ್, ಸೂರಜ್, ಸದಾಶಿವ್, ಅರುಣ್ ,ಬಾಲಾಜಿ, ಕಿರಣ್ ಮತ್ತು ಕಾರ್ಯಕರ್ತರು ಇದ್ದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ, ಪೊಲೀಸ್ ಬಡಾವಣೆ, ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಪೊಲೀಸ್ ಬಡಾವಣೆಯ ಎರಡನೇ ಹಂತದಲ್ಲಿರುವ (ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ) ತಿಪ್ಪಯ್ಯನ ಕೆರೆ ಸುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯದಲ್ಲಿ ಬಡಾವಣೆಯ ನಿವಾಸಿಗಳು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, ಮೈಸೂರು ಪ್ರಕೃತಿದತ್ತವಾದ ನಗರವಾಗಿದ್ದು, ಇಡೀ ದೇಶದಲ್ಲೇ ಭೌಗೋಳಿಕವಾಗಿ ತನ್ನದೇ ಆದ ಸ್ಥಾನ ಕಂಡುಕೊಂಡಿದೆ. ಇಂತಹ ನಗರವನ್ನು ಸ್ವಚ್ಚವಾಗಿರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಬೆಳಗ್ಗೆ 8 ರಿಂದ ಆರಂಭವಾದ ಸ್ವಚ್ಚತಾ ಕಾರ್ಯದಲ್ಲಿ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಸಿಇಓ ನರಸಿಂಹಮೂರ್ತಿ, ಕಿರಿಯ ಆರೋಗ್ಯ ನಿರ್ವಾಹಕ ಚನ್ನನಾಯಕ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಮನುಕುಮಾರ್, ಮಾನಸ, ಮೋಹನ ಕುಮಾರ್, ಶಿವಸ್ವಾಮಿ, ಲೀಲಾ ಶಿವಕುಮಾರ್, ಬಿ.ಎಲ್. ತ್ರಿಪುರಾಂತಕ, ಮೋಹನರಾವ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕ ಸಿಬ್ಬಂದಿ ಭಾಗವಹಿಸಿದ್ದರು.