ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೆ ಬೆಂಗಳೂರಿನಲ್ಲಿ ತೀವ್ರ ರಾಜಕೀಯ ನಡೆದಿದೆ.
ಈಗಾಗಲೇ 124 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ 50 ಅಭ್ಯರ್ಥಿಗಳ ಘೋಷಣೆಗೆ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಸಭೆ ನಡೆಸಿದೆ.
ಎರಡನೇ ಹಂತದಲ್ಲಿ 50 ಅಭ್ಯರ್ಥಿಗಳ ಹೆಸರು ಕೇಂದ್ರದ ಕಾಂಗ್ರೆಸ್ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಜರುಗಿದ ಸಭೆ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಹಾಲಿ ಶಾಸಕರ ಪೈಕಿ ಆರು ಜನರಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಆ ಕ್ಷೇತ್ರಗಳೂ ಸೇರಿದಂತೆ ಇತರೆ 44 ಕ್ಷೇತ್ರಗಳಿಗೆ ಪರಿಶೀಲನಾ ಸಮಿತಿಯಲ್ಲಿ ಪಟ್ಟಿ ಸಿದ್ಧಪಡಿಸಿ ನಾಳೆಯೇ ದೆಹಲಿಗೆ ಪಟ್ಟಿ ರವಾನೆ ಮಾಡಲು ಈ ಸಭೆಯಲ್ಲಿ ನಿರ್ಣಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷವಾಗಿ ಪದ್ಮನಾಭನಗರದಿಂದ ಬಿಜೆಪಿಯ ಆರ್. ಅಶೋಕ್ ವಿರುದ್ಧ ಮಾಜಿ ಸಚಿವ ಪಿಜಿಆರ್ ಸಿಂಧ್ಯ ಅವರನ್ನು ಕಣಕ್ಕಿಳಿಸುವ ಕುರಿತಂತೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಮೂಲಕ ಪಂಚಮಸಾಲಿ ಟ್ರಂಪ್ ಕಾರ್ಡ್ ಚಾಲನೆಗೆ ತರಲು ಚರ್ಚೆ ನಡೆದಿದ್ದು, ಜೊತೆಗೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮುಖ್ಯಮಂತ್ರಿ ತವರು ಕ್ಷೇತ್ರದ ಮಂಜುನಾಥ್ ಕುನ್ನೂರ್ ಅವರ ಹೆಸರೂ ಸಹ ಸಿಎಂ ವಿರುದ್ಧ ಅಭ್ಯರ್ಥಿಯಾಗಲು ಚರ್ಚೆಗೆ ಬಂದಿರುವುದಾಗಿ ಗೊತ್ತಾಗಿದೆ.
ಸಮ್ಮಿಶ್ರ ಸರ್ಕಾರ ಪದಚ್ಯುತಗೊಂಡು ಕಾಂಗ್ರೆಸ್ನಿಂದ ಬಿಜೆಪಿಗೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ 14 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಎರಡನೇ ಪಟ್ಟಿಯಲ್ಲಿ ಶಿಫಾರಸು ಮಾಡದೆ ಕಾಂಗ್ರೆಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಬಿಜೆಪಿ ಮೀಸಲಾತಿ ಕಲ್ಪಿಸಿದ ಹಿನ್ನೆಲೆಯಲ್ಲಿ ಅದರಿಂದ ಬಿಜೆಪಿಗೆ ಆಗುವ ಲೆಕ್ಕಾಚಾರಗಳನ್ನೂ ಸಹ ಪರಿಶೀಲಿಸಿ ಆ ಸಮುದಾಯದ ಅಭ್ಯರ್ಥಿಗಳಿಗೆ ಯಾವ ರೀತಿ ಪ್ರಾತಿನಿಧ್ಯ ನೀಡುವ ಮೂಲಕ ಕಾಂಗ್ರೆಸ್ ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಜಯಗಳಿಸಬೇಕು ಎನ್ನುವ ತಂತ್ರಗಾರಿಕೆಯನ್ನೂ ಸಹ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಇದಲ್ಲದೆ, ಸಿದ್ದರಾಮಯ್ಯ ಅವರನ್ನು ಈಗಾಗಲೇ ವರುಣಾ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಕೋಲಾರದಿಂದಲೂ ಸಹ ಅವರು ಸ್ಪರ್ಧೆ ಮಾಡಲು ಪಕ್ಷ ಅವಕಾಶ ಕೊಡುವ ಸಾಧ್ಯತೆ ಇದ್ದು, ಎರಡನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆ ಮಾಡದೆ ಕೊನೆಯ ಪಟ್ಟಿಯಲ್ಲಿ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸಲು ತೀರ್ಮಾನ ಮಾಡಲಾಗಿದೆ ಎಂದು ಗೊತ್ತಾಗಿದೆ.
ಅಲ್ಲದೆ, ಈಗಾಗಲೇ 124 ಕ್ಷೇತ್ರಗಳಿಗೆ ಅಬ್ಯರ್ಥಿಗಳನ್ನು ಘೋಷಿಸಲಾಗಿದೆ. ಉಳಿದ 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿನ ಭೀತಿ ಇರುವ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತಂತೆ ಚರ್ಚೆಯಾಗಿದ್ದು, ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಜೆಡಿಎಸ್ನಿಂದ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ಅಂತಹವರನ್ನು ಕಾಂಗ್ರೆಸ್ಗೆ ಸೆಳೆಯುವ ಕುರಿತು ಸಹ ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ನಗರದ ಖಾಸಗಿ ಹೋಟೆಲೊಂದರಲ್ಲಿ ಜರುಗಿದ ಸಭೆಯಲ್ಲಿ ಎರಡನೇ ಪಟ್ಟಿಯಲ್ಲಿ 50 ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗಿದ್ದು, ಸಭೆಯಲ್ಲಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಡಿ. ಪರಮೇಶ್ವರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿ ಕಾಂಗ್ರೆಸ್ನ ಕೆಲ ಮುಖಂಡರು ಭಾಗವಹಿಸಿದ್ದರು.