ಸೂಲಿಬೆಲೆ, ಏ.12: ದೇಹದಾರ್ಢ್ಯ ಕ್ರೀಡೆಯೂ ಸಹ ಒಂದು ಕಲೆಯಿದ್ದಂತೆ ಎಂದು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಸಲಹೆಗಾರರಾದ ತವಟಹಳ್ಳಿ ಮುನಿರಾಜು ಭಾಗವತರು ತಿಳಿಸಿದರು.
ನಗರದ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾದ ಮುರಳಿರವರನ್ನು ಅಭಿನಂದಿಸಿ ಮಾತನಾಡಿದರು.
ಎನ್ ಪಿ ಸಿ ವರ್ಲ್ಡ್ ವೈಟ್ ಇಂಡಿಯಾ ಸಂಸ್ಥೆಯವರು ನಡೆಸಿದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹೊಸಕೋಟೆಯಿಂದ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮುರಳಿ ಪ್ರಥಮ ಸ್ಥಾನ ಪಡೆದು ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಹೊಸಕೋಟೆಯ ಹಿರಿಮೆಗೆ ಮತ್ತೊಂದು ಗರಿ ಮೂಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂಎನ್ಆರ್ ನಟರಾಜ್ ಮಾತನಾಡಿ, ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳು ಓದಿ ಉನ್ನತ ಹುದ್ದೆ ಪಡೆದು ಮದುವೆ ಮನೆ ಮಕ್ಕಳು ವಂಶ ಬೆಳಗಲಿ ಎಂದು ಆಸೆ ಪಡುವ ಈ ಕಾಲದಲ್ಲಿ ಮುರಳಿರವರು ವಿವಾಹವಾಗದೆ ತಮ್ಮ ಜೀವನವನ್ನೆ ದೇಹದಾರ್ಢ್ಯ ಸ್ಪರ್ಧೆಗೆ ಮುಡಿಪಾಗಿಟ್ಟಿದ್ದಾರೆ. ಈಗಾಗಲೇ ಮಿಸ್ಟರ್ ಕರ್ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ಈಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಅವರ ಮುಂದಿನ
ಸಾಧನೆಗೆ ನೆರವಿನ ಅವಶ್ಯಕತೆಯಿದ್ದು ದಾನಿಗಳು ಸಂಘಸಂಸ್ಥೆಗಳು ಮುಂದಾಗಬೇಕಿದೆ ಎಂದರು.
ಈ ಸಂಧರ್ಭದಲ್ಲಿ ಕಲಾವಿದರ ಸಂಘದ ಮಾಜಿ ಅಧ್ಯಕ್ಷರಾದ ವೆಂಕಟರಮಣಪ್ಪ , ನಿರ್ದೇಶಕರಾದ ರಾಮಾಂಜಿನಪ್ಪ ಶಂಭುಲಿಂಗಪ್ಪ, ಕಲಾವಿದರಾದ ಬಸಣ್ಣ. ದಾಸಿಣಿ ಕೃಷ್ಣಮ್ಮ, ಮುನಿರಾಮಣ್ಣ, ವೆಂಕಟರಾಮಪ್ಪ ಹಾಗೂ ದೇಹದಾರ್ಢ್ಯ ಪಟು ಮೂರ್ತಿ ಇದ್ದರು.