ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.21:ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಾಕಷ್ಟಿದ್ದರೂ ಸಹ ಕಾಂಗ್ರೆಸ್ ರಾಜ್ಯ ಸರ್ಕಾರವು ವಾಸ್ತವ ಪರಿಸ್ಥಿತಿ ಅರಿಯದೆ ಅವಿವೇಕತನದಿಂದ ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಮುಖ್ಯಮಂತ್ರಿ ಚಂದ್ರು ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ 3251 ಎಂಬಿಬಿಎಸ್ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸಿರುವಾಗ ಕೇವಲ 1897 ಹುದ್ದೆಗಳು ಮಾತ್ರ ಖಾಲಿ ಇದೆ ಎಂದು ಹೇಳುತ್ತಾ 1354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತದೆ ಎಂಬ ನೆಪ ಒಡ್ಡಿ ಸರ್ಕಾರವು ವೈದ್ಯರುಗಳ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯನ್ನು ರದ್ದುಗೊಳಿಸಲು ಸುಗ್ರೀವಾಜ್ಞೆಯನ್ನು ಹೊರಳಿಸುತ್ತಿರುವುದು ನಿಜಕ್ಕೂ ಸರ್ಕಾರಕ್ಕೆ ರಾಜ್ಯದ ಜನತೆಯ ಆರೋಗ್ಯದ ಬಗ್ಗೆ ತಾತ್ಸಾರ ನೀತಿ ಇರುವುದನ್ನು ಸ್ಪಷ್ಟ ಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಕಳವಳ ವ್ಯಕ್ತಪಡಿಸಿದರು.
” ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ದೆಹಲಿಯ ಮೊಹಲ್ಲ ಕ್ಲಿನಿಕ್ ಗಳ ಮಾದರಿಯಲ್ಲಿ ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್ ಗಳನ್ನು ಕೇವಲ ಮತ ಸೆಳೆಯುವ ದೃಷ್ಟಿಯಿಂದ ಅತುರಾತುರವಾಗಿ ಸ್ಥಾಪಿಸಿದರು. ಈಗ ರಾಜ್ಯದ ಎಲ್ಲಾ ನಮ್ಮ ಕ್ಲಿನಿಕ್ ಗಳಲ್ಲಿ ವೈದ್ಯರುಗಳೇ ಇಲ್ಲದೆ ಯಾವುದೇ ಸೂಕ್ತ ಆರೋಗ್ಯ ಸೇವೆಗಳು ಲಭಿಸದೆ ಸಾರ್ವಜನಿಕರು ಯಾರು ಅಲ್ಲಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ .
ಈಗಿನ ಸರ್ಕಾರ ಹೊಸ ವೈದ್ಯರುಗಳನ್ನು ನಮ್ಮ ಆರೋಗ್ಯ ಕ್ಲಿನಿಕ್ ಗಳಲ್ಲಿ ನೇಮಿಸದೆ ಇರುವುದನ್ನು ಗಮನಿಸಿದರೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಸಹ ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಎಷ್ಟು ತಾತ್ಸಾರ ಮನೋಭಾವವಿದೆ ಎಂಬುದನ್ನು ಎತ್ತು ತೋರಿಸುತ್ತದೆ. ಯಾವುದೇ ವೈದ್ಯರುಗಳ ಕೊರತೆ ಇಲ್ಲ ಎಂದು ಸುಳ್ಳು ಹೇಳುವುದನ್ನು ಬಿಟ್ಟು, ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು , ಜಿಲ್ಲಾಸ್ಪತ್ರೆಗಳು ಹಾಗೂ ನಮ್ಮ ಕ್ಲಿನಿಕ್ ಗಳಲ್ಲಿ ವೈದ್ಯರುಗಳನ್ನು ನೇಮಿಸಬೇಕು ಹಾಗೂ ಕೂಡಲೇ ಈ ಸುಗ್ರೀವಾಜ್ಞೆಯನ್ನು ಹೊರಡಿಸುವುದನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಅಗ್ರಹಿಸಿದರು.