ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಜೂ.06: ಪಾಠಗಳು ನಡೆಯುತ್ತಿದ್ದ ವೇಳೆಯಲ್ಲಿಯೇ ಶಾಲಾ ಕಟ್ಟಡಕ್ಕೆ ಬೆಂಕಿ, ಕ್ಷಣಮಾತ್ರದಲ್ಲಿ ಬಚಾವಾದ ವಿದ್ಯಾರ್ಥಿಗಳು.
ಸಿರುಗುಪ್ಪ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದುಗಡೆ 150 ಎ ಹೆದ್ದಾರಿ ರಸ್ತೆಗೆ ಹೊಂದಿಕೊಂಡಂತಿರುವ ಸುದೀಕ್ಷಾ ಇಂಟರ್ನ್ಯಾಷನಲ್ ಶಾಲೆ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು, ಎಂದಿನಂತೆ ಇಂದು ಬೆಳಗ್ಗೆಯಿಂದ ಎಲ್ಲಾ ತರಗತಿಗಳಲ್ಲಿ ಪಾಠಗಳು ನಡೆಯುತ್ತಿದ್ದವು. ಆದರೆ ವಿದ್ಯುತ್ ಪೂರೈಕೆ ಸ್ಥಗಿತವಾದ್ದರಿಂದ ಶಾಲೆಯ ಜನರೇಟರ್ ಆನ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜನರೇಟರ್ ಕೊಠಡಿಯಲ್ಲಿನ ವಿದ್ಯುತ್ ವಯರ್ ಗಳಲ್ಲಿ ಮೊದಲು ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ ಹೊಗೆ ಮತ್ತು ಬೆಂಕಿ ಕಾಣುತ್ತಲೇ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ತಕ್ಷಣ ಎಲ್ಲ ವಿದ್ಯಾರ್ಥಿಗಳನ್ನು ಕಟ್ಟಡದ ಹಿಂಬಾಗಿಲಿನಿಂದ ಸುರಕ್ಷಿತವಾಗಿ ಸುಮಾರು 150ಕ್ಕೂ ಹೆಚ್ಚು ವಿಧ್ಯಾರ್ಥಿಗಳನ್ನು ಕಟ್ಟಡದಿಂದ ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ವಾಹನದೊಂದಿಗೆ ಆಗಮಿಸಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಈ ಕಟ್ಟಡದ ಪಕ್ಕದಲ್ಲಿಯೇ ಕೆಲವು ತಿಂಗಳ ಹಿಂದೆ ಪ್ರಾರಂಭವಾಗಿರುವ ವಿಎಎಂ ಫುಡ್ ಬಜಾರಿನಲ್ಲಿ ಸುಮಾರು ಎರಡು ಕೋಟಿ ಅಂದಾಜು ಮೌಲ್ಯದ ದಾಸ್ತಾನು ಹಾಗೂ ಸಾಮಾನುಗಳಿದ್ದು ಅಗ್ನಿಶಾಮಕ ಸಿಬ್ಬಂದಿ ಬರುವುದು ತಡವಾಗಿದ್ದರೆ ಭಾರಿ ಅನಾಹುತ ವಾಗುವ ಸಂಭವವಿತ್ತು ಬೆಂಕಿಯ ಕೆನ್ನಾಲಿಗೆಯು ಬಿಸಿಲಿನ ತಾಪಕ್ಕೆ ಹೆಚ್ಚು ರೌದ್ರಾವತಾರ ಹೊಂದಿತ್ತು