ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.25: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಂಗಳೂರಿನಲ್ಲಿಯೇ 28 ಕ್ಷೇತ್ರಗಳು ಇರುವುದರಿಂದ ಸಹಜವಾಗಿಯೇ ಬೆಂಗಳೂರಿನಲ್ಲಿ ಪ್ರಭಾವ ಬೀರುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯ. ಹೀಗಾಗಿ ನಗರ ವಾಸಿಗಳನ್ನು ಸೆಳೆಯಲು ಕಾಂಗ್ರೆಸ್ ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಇದರಲ್ಲಿ ಬಹುತೇಕ ಹಾಲಿ ಶಾಸಕರೇ ಇದ್ದರೆ, ಕೆಲವೆಡೆ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಜಾತಿ ಲೆಕ್ಕಾಚಾರವನ್ನೂ ಪಕ್ಕಾ ಮಾಡಿರುವುದು ಕಂಡುಬರುತ್ತಿದೆ. ಹಾಲಿ ಶಾಸಕರಾದ ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಚಾಮರಾಜಪೇಟೆಯಿಂದ ಜಮೀರ್ ಅಹಮದ್, , ವಿಜಯನಗರ ಎಂ.ಕೃಷ್ಣಪ್ಪ, ಬಿಟಿಎಂ ಲೇಔಟ್ನಿಂದ ರಾಮಲಿಂಗಾರೆಡ್ಡಿ, ಜಯನಗರದಿಂದ ಸೌಮ್ಯಾರೆಡ್ಡಿ, ಬ್ಯಾಟರಾಯನಪುರದಿಂದ ಕೃಷ್ಣಬೈರೇಗೌಡ, ಹೆಬ್ಬಾಳ ಬೈರತಿ ಸುರೇಶ್, ಸರ್ವಜ್ಞನಗರ ಕೆ.ಜೆ. ಜಾರ್ಜ್, ಶಾಂತಿನಗರದಿಂದ ಎನ್.ಎ. ಹ್ಯಾರೀಸ್ ಮತ್ತು ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿದ್ದು, ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ಪುಟ್ಟಣ್ಣ ಅವರಿಗೆ ರಾಜಾಜಿನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಳೆದ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಚ್. ಕುಸುಮಾ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಸೋತರೂ ಸಹ ಎದೆಗುಂದದ ಕುಸುಮಾ ಅವರು ಕ್ಷೇತ್ರದಲ್ಲಿ ಹಗಲಿರುಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಿಂದ ಮಾಜಿ ಶಾಸಕ, ಕಳೆದ ಬಾರಿ ವಿ. ಸೋಮಣ್ಣ ವಿರುದ್ಧ ಪರಾಭವಗೊಂಡಿದ್ದ ಪ್ರಿಯಕೃಷ್ಣ ಅವರಿಗೆ ಟಿಕೆಟ್ ಸಿಕ್ಕಿದೆ. ವಿಜಯನಗರ ಮತ್ತು ಗೋವಿಂದರಾಜನಗರದಲ್ಲಿ ತಂದೆ ಮಗನಿಗೆ ಟಿಕೆಟ್ ಸಿಕ್ಕರೆ, ಬಿಟಿಎಂ ಲೇಔಟ್ ಮತ್ತು ಜಯನಗರದಲ್ಲಿ ತಂದೆ ಮಗಳಿಗೆ ಟಿಕೆಟ್ ಲಭ್ಯವಾಗಿದ್ದು, ಕಾಂಗ್ರೆಸ್ನಲ್ಲಿ ಕುಟುಂಬ ರಾಜಕೀಯ ಇಲ್ಲಿ ಢಾಳಾಗಿ ಕಾಣಿಸುತ್ತಿದೆ. ಇನ್ನು ರಾಜಾಜಿನಗರದಲ್ಲಿ ಬೇರೆ ಪಕ್ಷದಿಂದ ವಲಸೆ ಬಂದ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಕ್ಷೇತ್ರದ ಮುಖಂಡರು ಸಿದ್ದರಾಮಯ್ಯ ಅವರ ಮನೆ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ರಾಜಾಜಿನಗರದಲ್ಲಿ ಕೆಪಿಸಿಸಿ ಭವ್ಯಾ ನರಸಿಂಹಮೂರ್ತಿ ಪ್ರಬಲ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಮಾಜಿ ಮೇಯರ್ ಪದ್ಮಾವತಿ, ಮಹಿಳಾ ಕಾಂಗ್ರೆಸ್ ಘಟಕದ ಆರ್. ಮಂಜುಳಾ ನಾಯ್ಡು, ಯುವ ಕಾಂಗ್ರೆಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಘುವೀರ್ ಎಸ್. ಗೌಡ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಪಕ್ಷದ ಮೂಲ ಕಾರ್ಯಕರ್ತರನ್ನು ಬಿಟ್ಟು ಹೊರಗಿನಿಂದ ಬಂದ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಿರುವುದು ಕ್ಷೇತ್ರದಲ್ಲಿ ಈಗಾಗಲೇ ಗೊಂದಲ ಮೂಡಿಸಿದೆ. ಇನ್ನು ಮಲ್ಲೇಶ್ವರ ಕ್ಷೇತ್ರಕ್ಕೆ ಅನೂಪ್ ಅಯ್ಯಂಗಾರ್ ಎಂಬ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ಇವರ ಹೆಸರು ಕೇಳಿದವರು ಬಹಳ ಕಡಿಮೆ. ಕಳೆದ ಒಂದುವರ್ಷದಿಂದಷ್ಟೇ ಪಕ್ಷದ ಕಾರ್ಯಕ್ರಮಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮಲ್ಲೇಶ್ವರ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಓಟುಗಳನ್ನು ಒಡೆಯುವ ದೃಷ್ಟಿಯಿಂದ ಅನೂಪ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ಸಹ ಹೊಸ ಅಭ್ಯರ್ಥಿಯಾದ ಅನೂಪ್ ಅಯ್ಯಂಗಾರ್ ಅವರು ಸರ್ಕಾರದ ಪ್ರಮುಖ ಸಚಿವರೂ ಆದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಲಿದ್ದಾರೆ ಕಾದು ನೋಡಬೇಕು.