ಸುದ್ದಿಮೂಲ ವಾರ್ತೆ
ತಿಪಟೂರು,ಜೂ.18 : ತೆಂಗಿನಕಾಯಿ ಪ್ಯಾಕ್ಟರಿಯಿಂದ ಸುತ್ತಮುತ್ತಲ ಗ್ರಾಮಸ್ಥರ ಹಾಗೂ ಜಾನುವಾರುಗಳ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಸೂಕ್ತ ಕ್ರಮ ಜರುಗಿಸಬೇಕೆಂದು ಮೀಸೆತಿಮ್ಮನಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ರವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾರ್ಥವಳ್ಳಿ ಉಪಾಧ್ಯಕ್ಷರಾದ ವಿನಯ್, ವಿರುಪಾಕ್ಷಿಪುರ ಗ್ರಾಮದ ಸರ್ವೆನಂಬರ್ನಲ್ಲಿ ಜಿ.ಧನಂಜಯ ಬಿನ್ ಗವಿರಂಗಯ್ಯರವರ ಜಮೀನಿನಲ್ಲಿ ಸ್ಥಾಪಿತವಾಗಿರುವ ತೆಂಗಿನಕಾಯಿ ಪ್ಯಾಕ್ಟರಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಅನುಮತಿ ಪತ್ರವನ್ನು ಪಡೆದುಕೊಂಡಿದೆಯೋ ಅಥವಾ ಇಲ್ಲವೋ ಎಂಬುದೂ ಸ್ಪಷ್ಟವಿಲ್ಲ ಎಂದರು.
ಈ ಪ್ಯಾಕ್ಟರಿಯಿಂದ ಬರುವ ತೆಂಗಿಕಾಯಿ ನೀರು ರಸ್ತೆ ಪಕ್ಕ ಬಂದು ನಿಂತು ದುರ್ವಾಸನೆಯಿಂದ ಕೂಡಿರುತ್ತದೆ. ಇದನ್ನು ಕುಡಿದ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಸುಮಾರು ಹಸುಗಳು ಗರ್ಭವನ್ನು ಕಳೆದುಕೊಂಡಿವೆ. ಜೊತೆಗೆ ಉಸಿರಾಟದ ತೊಂದರೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಭಯಬೀತರಾಗಿ ತಿರುಗಾಡುವ ಸಂದರ್ಭ ಬಂದಿದೆ ಎಂದರು.
ಸ್ಥಳೀಯ ಮಲ್ಲಪ್ಪ ಮಾತನಾಡಿ, ತೆಂಗಿನಕಾಯಿ ನೀರು ಅಂತರ್ರ್ಜಲದೊಂದಿಗೆ ಸೇರಿ ಕುಡಿಯುವ ನೀರು
ಕಲುಷಿತಗೊಂಡಿದೆ. ಇದರಿಂದ ಅನೇಕ ರೋಗಗಳು ಸುತ್ತಮುತ್ತಲ ಗ್ರಾಮಸ್ಥರನ್ನು ಕಾಡುತ್ತಿವೆ. ಉಸಿರಾಟದ ತೊಂದರೆ ಇರುವವರು ಆ ರಸ್ತೆಯಲ್ಲಿ ತಿರುಗಾಡುವಂತಿಲ್ಲ. ಕೂಡಲೇ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಿದರು.
ಮಾಜಿ ಗ್ರಾಪಂ ಸದಸ್ಯ ಲಕ್ಷ್ಮಣ ನಾಯಕ ಮಾತನಾಡಿ, ಹಸುಗಳಿಗೆ ಗರ್ಭಪಾತವಾಗುತ್ತಿದೆ. ಪರಿಸರ ನಾಶವಾಗುತ್ತದೆ. ರಸ್ತೆ ಪಕ್ಕದ ಮರಗಿಡಗಳೆಲ್ಲ ನಾಶವಾಗಿವೆ. ಇದನ್ನು ಮುಂದುವರಿಯಲು
ಬಿಟ್ಟರೆ ಸುತ್ತಮುತ್ತಲಿನ ಪರಿಸರ ನಾಶವಾಗುತ್ತದೆ. ಇದೇ ರೀತಿ ಮಣಿಕೀಕೆರೆ ಸಾರ್ಥವಳ್ಳಿ ಸುತ್ತಮುತ್ತ ಅನೇಕ ಪ್ಯಾಕ್ಟರಿಗಳು ತಲೆ ಎತ್ತಿದ್ದು, ಅನಧಿಕೃತವಾಗಿರುವ ಪ್ಯಾಕ್ಟರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ತಾಲ್ಲೂಕು
ಆಡಳಿತದಿಂದ ಆಗಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಪವನ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಸೂಕ್ತ ಕ್ರಮವನ್ನು
ಕೈಗೊಳ್ಳುವ ಭರವಸೆಯನ್ನು ನೀಡಿದರು. ಪುಟ್ಟನಾಯ್ಕ, ರತ್ನಮ್ಮ, ಲೋಕೇಶ್, ಗಂಗಮ್ಮ, ವೀರೇಶ್, ಈಶ್ವರಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.