ಸುದ್ದಿಮೂಲವಾರ್ತೆ
ಕೊಪ್ಪಳ ಜೂ 06:ಆಂಕರ್ ಆಡಳಿತಕ್ಕೆ ಬರುವ ಮುನ್ನ ಉಚಿತ, ಖಚಿತ, ನಿಶ್ಚಿತ ಎಂದು ಹೇಳಿದ ಕಾಂಗ್ರೆಸ್ ಮುಖಂಡರು ಈಗ ಉಚಿತಕ್ಕೆ ನಿಯಮಗಳನ್ನು ತರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಸರಕಾರದ ಬಗ್ಗೆ ಭ್ರಮನಿರಸನವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಇಂದು ರಾಜ್ಯ ಸರಕಾರದ ವಿರುದ್ದ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಿದ್ದರಾಮಯ್ಯ ಚುನಾವಣೆ ಯ ಮುನ್ನ ಎಲ್ಲಾ ಉಚಿತ ಎಂದು ಹೇಳಿದ್ದಾರೆ. ಆದರೆ ಈಗ ವಿದ್ಯುತ್ ಉಚಿತ ನೀಡುವಾಗ ವಾರ್ಷಿಕ ಸರಾಸರಿ ಪರಿಗಣಿಸಯವುದಾಗಿ ಹೇಳಿದ್ದಾರೆ.
ಇದೇ ವೇಳೆ ಸರಕಾರಿ ಬಸ್ ಗಳಲ್ಲಿ ಸಂಚರಿಸುವವರೆಗೆ ಮಾತ್ರ ಉಚಿತ ಎನ್ನುವದು ದ್ವಂದ್ವ ನೀತಿಯಾಗಿದೆ. ಈ ಮಧ್ಯೆ ಜುಲೈ 7 ರಂದು ಬಜೆಟ್ ಮಂಡಿಸುತ್ತೇವೆ. ಅಂದು ಗ್ಯಾರಂಟಿ ಯೋಜನೆಗಳಿಗೆ ಸ್ಪಷ್ಠನೆ ನೀಡುತ್ತೇವೆ ಎಂದಿದ್ದಾರೆ. ಇನ್ನೊಂದು ಕಡೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 50 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಈ ಹಣಕ್ಕೆ ಏನು ಮಾಡುತ್ತಾರೆ ಎಂಬ ಬಗ್ಗೆ ಅವರಲ್ಲಿ ಸ್ಪಷ್ಠತೆ ಇಲ್ಲ ಎಂದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ಶಾಸಕ ದೊಡ್ಡನಗೌಡ ಪಾಟೀಲ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ ಮಧ್ಯೆ ಆಡಳಿತ ಹೊಂದಾಣಿಕೆ ಇಲ್ಲದೆ ಇರುವದರಿಂದ ಅದನ್ನು ಜನರ ಮೇಲೆ ಹೇರುತ್ತಿದ್ದಾರೆ. ಬಿಜೆಪಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನದ ಬಗ್ಗೆ ಸ್ಪಷ್ಠತೆ ಇಲ್ಲದೆ ಅನುಷ್ಠಾನ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಮೋಸವಾಗುತ್ತಿದೆ ಎಂದರು.
ಕೊಪ್ಪಳ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಸರಕಾರ ಲುಚ್ಛ್ಯಾ ಸರಕಾರ ಎಂದು ಘೋಷಣೆ ಹಾಕಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ನಾಗಪ್ಪ ಸಾಲೋಣಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ ವೀರಪ್ಪ ಸೇರಿ ಹಲವರು ಭಾಗಿಯಾಗಿದ್ದರು.