ಶ್ರೀನಿಧಿ ಜೈನ್.
ಬೆಂಗಳೂರು, ಮಾ.21: ಅಂತೂ-ಇಂತೂ ಯುಗಾದಿ ಹಬ್ಬ ಬಂದೇಬಿಟ್ಟಿತು. ಕಾತುರದಿಂದ ಕಾಯುತ್ತಿರುವ ಹಿಂದೂಗಳ ವರ್ಷದ ಆರಂಭದ ಶುಭ ದಿನ ಇದು. ಇಡೀ ಭಾರತದಾದ್ಯಂತ ಹಿಂದುಗಳು ಇದನ್ನು ಹೊಸವರ್ಷ ಎಂದು ತಿಳಿದುಕೊಂಡು ಬೇವು-ಬೆಲ್ಲದ ಸಮಪ್ರಮಾಣದ ಸೇವನೆಯೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ. ಯುಗಾದಿ ಪದದ ಉತ್ಪತ್ತಿ ಯುಗ+ಆದಿ. ಹೊಸ ಯುಗದ ಆರಂಭ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಯುಗಾದಿ ಹಬ್ಬದಂದು ಬೇವು, ಬೆಲ್ಲ ಸವಿಯುವ ಸಂಪ್ರದಾಯವಿದೆ. ಚೈತ್ರ ಮಾಸದ ಮೊದಲನೆಯ ದಿನ ಬರುವ ಈ ಹಬ್ಬದಂದು ಜನರು ಬೇವು ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತಾರೆ. ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ. ಇದರ ಹಿಂದೆ ಸಂಗತಿಯೊಂದು ಅಡಗಿದೆ. ಯುಗಾದಿ ಹಬ್ಬದ ಸಂಕೇತವೇ ಬೇವು ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕು ಎಂಬ ಅರ್ಥವನ್ನು ಈ ಬೇವು ಬೆಲ್ಲ ಸೂಚಿಸುತ್ತದೆ. ಇದು ಕೇವಲ ಸಂಪ್ರದಾಯಕ್ಕೆ ಅಷ್ಟೇ ಮೀಸಲಾಗಿಲ್ಲ ಹಬ್ಬವನ್ನು ಒರತು ಪಡಿಸಿ ನೋಡುವುದಾದರೆ ಆರೋಗ್ಯದ ದೃಷ್ಠಿಯಲ್ಲೂ ಈ ಹಬ್ಬ ಉಪಯುಕ್ತವಾಗಿದೆ ಎಂದು ತಿಳಿಯಬಹುದು. ಹಿರಿಯರು ಮಾಡಿರುವ ಆಚರಣೆಗಳು ಕೇವಲ ಮೂಡನಂಬಿಕೆಯಾಗಿರದೇ ಒಂದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂಬುವುದನ್ನುಈ ಮೂಲಕ ತಿಳಿಯೋಣ ಬನ್ನಿ… ವಿಶೇಷವಾಗಿ ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡುವುದು ವಾಡಿಕೆಯಲ್ಲಿದೆ. ಈ ಎಣ್ಣೆ ಸ್ನಾನ ಕೇವಲ ಸ್ನಾನವಷ್ಟೇ ಆಗಿರದೇ ಆರೋಗ್ಯದ ದೃಷ್ಠಿಯಿಂದಲು ಪ್ರಯೋಜನಕಾರಿಯಾಗಿದೆ. ಪ್ರತಿದಿನ ನಾವು ಸ್ನಾನ ಮಾಡುತ್ತೇವೆ. ಆದರೆ ಯುಗಾದಿ ಹಬ್ಬದಂದು ವಿಶೇಷವಾಗಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತೇವೆ. ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಭಾವದ ಸುರುಳಿಗಳು ಉತ್ಪತ್ತಿಯಾಗುತ್ತವೆ. ಜೊತೆಗೆ ಎಣ್ಣೆಯಲ್ಲಿ ಸ್ನಾನ ಮಾಡುವುದರಿಂದ ಚರ್ಮದ ತೇಜಸ್ಸು ಹೆಚ್ಚುವುದು, ಅಭ್ಯಂಜನ ಸ್ನಾನದಿಂದ ವ್ಯಕ್ತಿಯ ದೇಹದಲ್ಲಿನ ನಕಾರಾತ್ಮಕ ಶಕ್ತಿಗಳನ್ನು ತೆಗೆದು ಹಾಕಿ ಸಕಾರಾತ್ಮಕ ಭಾವನೆ ಮೂಡಿಸುತ್ತದೆ. ದೇಹದಲ್ಲಿ ಚೈತನ್ಯ ಹೆಚ್ಚಾಗುತ್ತದೆ ಇದರಿಂದ ವ್ಯಕ್ತಿ ಆರೋಗ್ಯವಾಗಿರುವುದರ ಜೊತೆಗೆ ಸಂತಸದಿಂದ ಇರುತ್ತಾರೆ ಎಂಬುವುದನ್ನು ವಿಜ್ಞಾನ ಹೇಳುತ್ತದೆ. ಅದೇ ರೀತಿ ಬೇವು ಬೆಲ್ಲದ ಉಪಯೋಗಗಳನ್ನು ತಿಳಿಯೋಣ. ಬೇವು ವೈಜ್ಞಾನಿಕವಾಗಿ ಬೇವಿನ ಹೂಗಳಲ್ಲಿ ಮತ್ತು ಎಲೆಗಳಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತದೆ. ಸಾಧಾರಣವಾಗಿ ಇವುಗಳು ಮನುಷ್ಯನ ದೇಹದಲ್ಲಿ ರಕ್ತ ಸಂಚಾರದಲ್ಲಿ ಕಂಡುಬರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ದೇಹದಲ್ಲಿ ವಿಷಕಾರಿ ತ್ಯಾಜ್ಯ ಗಳನ್ನು ಸಹ ನಿವಾರಣೆ ಮಾಡುವ ಗುಣವನ್ನು ಪಡೆದಿದೆ. ಇದರಿಂದ ಆರೋಗ್ಯಕರವಾದ ದೈಹಿಕ ಸ್ಥಿತಿ ನಮ್ಮದಾಗಲಿದೆ. ಬೆಲ್ಲ ಕಬ್ಬಿನಿಂದ ತಯಾರಾಗುತ್ತದೆ. ವೈಜ್ಞಾನಿಕವಾಗಿ ಇದರ ಉಪಯೋಗವನ್ನು ನೋಡುವುದಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ, ಲಿವರ್ ಭಾಗವನ್ನು ಸ್ವಚ್ಛಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಸಕ್ಕರೆ ಅಂಶಕ್ಕೆ ಹೋಲಿಸಿದರೆ ಬೆಲ್ಲ ನಮಗೆ ಸಾಕಷ್ಟು ಆರೋಗ್ಯಕರ ಎಂದು ಹೇಳುತ್ತಾರೆ. ನಿಸರ್ಗ ರೂಪದ ಸಕ್ಕರೆ ಪ್ರಮಾಣ ಇದರಲ್ಲಿ ಕಂಡುಬರುವುದರಿಂದ ಯಾವುದೇ ಅಡ್ಡಪರಿಣಾಮಗಳು ನಮಗೆ ಉಂಟಾಗುವುದಿಲ್ಲ. ಇಷ್ಟೋಲ್ಲ ತಿಳಿದ ಮೇಲು ಯುಗಾದಿಯನ್ನು ನಿರ್ಲಕ್ಷಿಸಬೇಕೇ…? ಬನ್ನಿ ಕುಟುಂಬದೊಂದಿಗೆ ಮನೆಯಲ್ಲಿಯೇ ಬೇವು ಬೆಲ್ಲ ಸವಿಯುತ್ತ ಯುಗಾದಿಯನ್ನು ಆಚರಿಸೋಣ .. ಮತ್ತೆ ಕೊರೊನಾ ಅಲ್ಲಲ್ಲಿ ಕಂಡು ಬರುತ್ತಿರುವುದರಿಂದ, ಹಬ್ಬದ ಆಚರಣೆಯಲ್ಲೂ ಸಹ ಕೊಂಚ ಮಿತಿ ಕಾಯ್ದುಕೊಳ್ಳುವುದು ಒಳ್ಳೆಯದು. ನಮ್ಮ ಮನೆಯ ಮಟ್ಟಿಗೆ ನಾವು ಹಬ್ಬವನ್ನು ಮನೆಮಂದಿಯ ಸಹಿತ ಖುಷಿಯಾಗಿ ಆಚರಿಸೋಣ.