ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಜು 6 : ಶಿಡ್ಲಘಟ್ಟ ತಾಲೂಕು ಸಹಿತ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 13 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸ್ಪಷ್ಟಪಡಿಸಿದರು.
ಶಿಡ್ಲಘಟ್ಟ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅಗತ್ಯಬಿದ್ದರೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲವೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸ್ಪಷ್ಟಪಡಿಸಿದರು.
ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಅನುದಾನವನ್ನು ಮಂಜೂರು ಮಾಡಿದೆ. ನಮ್ಮಲ್ಲಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಹಣವಿದೆ. ಯಾವ ಊರಿನಲ್ಲಿ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೂ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಂತಹ ಪರಿಸ್ಥಿತಿ ಬರುವುದಿಲ್ಲ. ಆದರೂ, ಸಹ ನಾವು ಸಮಸ್ಯೆಯನ್ನು ಎದರಿಸಲು ಸಜ್ಜಾಗಿದ್ದೇವೆ. ಪ್ರಾರಂಭದ ಹಂತದಲ್ಲಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ನಗರ ಪ್ರದೇಶದಲ್ಲಿ ಕೊಳವೆಬಾವಿಯನ್ನು ಕೊರೆಸಿ ಪೈಪ್ಲೈನ್ ಅಳವಡಿಸಲು ಕ್ರಮ ಕೈಗೊಂಡು ಮಿನಿ ಟ್ಯಾಂಕ್ಗಳನ್ನು ನಿರ್ಮಾಣ ಮತ್ತು ನೀರು ಪೂರೈಕೆ ಮಾಡಲು ಪೈಪ್ಲೈನ್ ಸಂಪರ್ಕ ಕಲ್ಪಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಕೇವಲ 7 ರಿಂದ 8ರಷ್ಟು ಬಿತ್ತನೆ ಕಾರ್ಯಪೂರ್ಣಗೊಂಡಿದೆ. ವಾಡಿಕೆಯಂತೆ 203 ಮೀ.ಮೀ ಮಳೆಯಾಗಬೇಕಿತ್ತು 198 ಮೀ.ಮೀ ಮಳೆಯಾಗಿದೆ. ಆದರೆ, ರೈತರಿಗೆ ಪೂರಕವಾಗಿ ಬೇಕಾಗಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ. ಯಾವುದೇ ರೀತಿಯ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರಿಗೆ ನೇರವಾಗಿ ಪರಿಹಾರ: ಆಲಿಕಲ್ಲು ಮಳೆ ಎಫೆಕ್ಟ್ ನಷ್ಟ ಪರಿಹಾರ ನೀಡುವ ಸಲುವಾಗಿ ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರಿಹಾರ ಪೋರ್ಟಲ್ನಲ್ಲಿ ಅಪಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಅನುಮೋದಿಸಿದರೆ ಅದು ಸರ್ಕಾರಕ್ಕೆ ಹೋಗುತ್ತದೆ ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣ ನೇರವಾಗಿ ರೈತರ ಖಾತೆಗಳಿಗೆ ನಷ್ಟ ಪರಿಹಾರ ಪಾವತಿಯಾಗುತ್ತದೆ ಎಂದರು.