ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.18: ಹೊಸ ಬಿಪಿಎಲ್ ಕಾರ್ಡ್ಗಳ ಅರ್ಜಿ ಆಹ್ವಾನವನ್ನು ಸದ್ಯಕ್ಕೆ ಪ್ರಾರಂಭಿಸುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅನ್ನಭಾಗ್ಯ ಯೋಜನೆಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಬಿಪಿಎಲ್ ಕಾರ್ಡ್ಗಳಿಗಾಗಿ ಈಗಾಗಲೇ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಅಂದಾಜು 1.5 ಲಕ್ಷ ಕಾರ್ಡ್ಗಳು ಅರ್ಹವಾಗಿವೆ. ಸುಮಾರು ಒಂದು ವರ್ಷದಿಂದ ಈ ಅರ್ಜಿಗಳ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇವರಿಗೆ ಮೊದಲು ಪಡಿತರ ಕಾರ್ಡ್ಗಳನ್ನು ಹಂಚಿಕೆ ಮಾಡಲಾಗುವುದು. ಈ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸುವ ಬಗ್ಗೆ ಯೋಚಿಸಲಾಗುವುದು ಎಂದು ಅವರು ತಿಳಿಸಿದರು.
ಕೆಲವೆಡೆ ನಕಲಿ ಕಾರ್ಡ್ಗಳ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ. ಆದರೆ, ಹೊಸ ಕಾರ್ಡ್ಗಳ ವಿತರಣೆ ಬಳಿಕ ಈಗ ಇರುವ ಎಲ್ಲಾ ಕಾರ್ಡ್ಗಳನ್ನು ಪರಿಶೀಲನೆಗೆ ಒಳಪಡಿಸಿ ಅನರ್ಹ ಕಾರ್ಡ್ಗಳನ್ನು ರದ್ದು ಮಾಡಲಾಗುವುದು ಎಂದು ಹೇಳಿದರು.
ಸೆಪ್ಟೆಂಬರ್ನಲ್ಲಿಯೂ ಹಣ:
ಅನ್ನಭಾಗ್ಯ ಯೋಜನೆಯಡಿ ಸೆಪ್ಟಂಬರ್ ತಿಂಗಳಿನಿಂದ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ, ಈ ತಿಂಗಳೂ ಸಹ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ಅಕ್ಕಿ ಬದಲು ಹಣವನ್ನೇ ನೀಡಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ನಮ್ಮ ಅಧಿಕಾರಿಗಳು ಆ ರಾಜ್ಯಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ನಮಗೆ ಬೇಕಾಗಿರುವಷ್ಟು ಅಕ್ಕಿ ಅಲ್ಲಿ ಲಭ್ಯ ಇದೆಯೇ? ಯಾವ ದರಕ್ಕೆ ನೀಡುತ್ತಾರೆ? ಅಲ್ಲಿಂದ ಸಾಗಣೆ ವೆಚ್ಚ ಎಷ್ಟಾಗುತ್ತದೆ? ಎಂಬಂತಹ ವಿವರಗಳನ್ನು ಪರಿಶೀಲಿಸಲಿದ್ದಾರೆ. ಒಂದು ವೇಳೆ ಎಲ್ಲವೂ ಒಪ್ಪಿಗೆಯಾದರೆ ಮುಂದಿನ ಎಂಟತ್ತು ದಿನಗಳ ಒಳಗೆ ಅಕ್ಕಿ ಖರೀದಿ ಬಗ್ಗೆ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಗುವುದು. ಇದು ಏನೇ ನಡೆದರೂ ಸಹ ಸೆಪ್ಟಂಬರ್ಗೆ ಅಕ್ಕಿ ಕೊಡಲು ಸಾಧ್ಯವಿಲ್ಲ. ಹೀಗಾಗಿ ಇದೊಂದು ತಿಂಗಳು ಅಕ್ಕಿ ಬದಲು ಹಣ ಕೊಡುವ ತೀರ್ಮಾನವೇ ಇದೆ ಎಂದು ಹೇಳಿದರು.
ಅಕ್ಕಿ ಜೊತೆಗೆ ರಾಗಿ ಮತ್ತು ಜೋಳ ಕೊಡುವ ಸಂಬಂಧ ಎಷ್ಟು ಪ್ರಮಾಣದಲ್ಲಿ ಆ ಧಾನ್ಯಗಳ ಖರೀದಿ ಅಗತ್ಯವಿದೆ ಎಂಬುದನ್ನೂ ಸಹ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಗಿ ಮತ್ತು ಜೋಳಕ್ಕೆ ಸಹ ಬೇಡಿಕೆ ಇದೆ. ಒಟ್ಟಾರೆ 10 ಕೆ.ಜಿ. ಧಾನ್ಯ ವಿತರಿಸುವುದು ನಮ್ಮ ಗುರಿಯಾಗಿದ್ದು, ಅದರಲ್ಲಿ ರಾಗಿ ಮತ್ತು ಜೋಳವನ್ನೂ ಕೆಲವಡೆ ನೀಡಲಾಗುತ್ತಿದೆ. ಆದ್ದರಿಂದ 4.5 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 2 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ, ಇದು ಸಾಲದು. ಹಾಗಾಗಿ ಅಗತ್ಯ ಪ್ರಮಾಣವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಖಾಲಿ ಹುದ್ದೆ ಭರ್ತಿಗೆ ಕ್ರಮ:
ಆಹಾರ ಇಲಾಖೆಯಲ್ಲಿ ಸದ್ಯ 2181 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ಭರ್ತಿಗೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.