ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 13: ಕರ್ನಾಟಕದಲ್ಲಿ ಕಾಂಗ್ರೆಸ್ನ ಅದ್ಭುತ ಗೆಲುವು ಜನತಾ ಜನಾರ್ದನನ ವಿಕ್ಟರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಾವೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಕೆಟ್ಟ ಆಡಳಿತದ ವಿರುದ್ಧ ಜನ ರೊಚ್ಚಿಗೆ ಎದ್ದು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಈ ಚುಣಾವಣೆ ಮೂಲಕ ಕರ್ನಾಟಕದ ಮತದಾರರು ತಾವು ಎಷ್ಟು ಪ್ರಬುದ್ಧರು ಎಂಬುದನ್ನು ಸಾಬೀತು ಂಮಾಡಿದ್ದಾರೆ ಎಂದು ಹೇಳಿದರು.
ಪ್ರಧಾನಮಂತ್ರಿ, ಕೇಂದ್ರದ ಗೃಹಸಚಿವರ, ಅಕ್ಕಪಕ್ಕದ ಮುಖ್ಯಮಂತ್ರಿಗಳು ಇಲ್ಲಿಯೇ ಬಂದು ಕ್ಯಾಂಪ್ ಮಾಡುವ ಮೂಲಕ ಮನಿ, ಮಸಲ್ ಪವರ್ ಪ್ರಯೋಗಿಸಿದರೂ ಜನ ಅದಕ್ಕೆ ಸೊಪ್ಪು ಹಾಕಿಲ್ಲ.
ನಾನು ವ್ಯಕ್ತಿಗತ ಟೀಕೆ ಮಾಡುವುದಿಲ್ಲ. ಆದರೆ, ಪ್ರಧಾನಿ ಮೋದಿಯವರು ಪದೇ ಪದೇ ಬಂದು ನನ್ನ ಮುಖ ನೋಡಿ ಓಟು ಕೊಡಿ ಎಂದು ಕೇಳಿದರು. ಆದರೆ, ಜನರು ಅವರ ಮುಖ ನೋಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದರು.
ಗೆದ್ದಂತಹ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸೋತ ಅಭ್ಯರ್ಥಿಗಳ ಪ್ರಯತ್ನವೂ ಶ್ಲಾಘನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಸಹ ಸಹಜ. ಒಳ್ಳೆಯ ಕೆಲಸ ಮಾಡಿಕೊಂಡು ಹೋದರೆ ಮುಂದೆಯೂ ಜನ ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಸಲಹೆ ನೀಡಿದರು.
ಗೆದ್ದಂತಹ ಎಲ್ಲಾ ಸದಸ್ಯರು ಬೆಂಗಳೂರಿಗೆ ಬರಬೇಕು ಎಂಬ ಸಂದೇಶ ನೀಡಲಾಗಿದೆ. ಅವರು ಸಂಜೆಯ ವೇಳೆಗೆ ಎಲ್ಲರೂ ಬೆಂಗಳೂರಿಗೆ ಬಂದು ಸಭೆ ನಡೆಸುತ್ತಾರೆ.
ಹೈಕಮಾಂಡ್ನಿಂದ ಅಬ್ಸರ್ವರ್ಸ್ ಶೀಘ್ರವೇ ಬೆಂಗಳೂರಿಗೆ ಬಂದು ಭೇಟಿ ನೀಡುತ್ತಾರೆ. ಅವರು ವರದಿ ನೀಡಿದ ಬಳಿಕ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.