This time 9 women MLAs will enter the Legislative Assembly
ಶ್ರೀನಿಧಿ ಜೈನ್
ಬೆಂಗಳೂರು, ಮೇ 13: ರಾಜ್ಯದ 224 ಶಾಸಕರುಗಳ ಪೈಕಿ 9 ಮಂದಿ ಮಹಿಳಾ ಶಾಸಕಿರು ಆಯ್ಕೆಯಾಗುವ ಮೂಲಕ ವಿಧಾಸಭೆ ಪ್ರವೇಶಿಸಲಿದ್ದಾರೆ.
ಘಟಾನುಘಟಿ ನಾಯಕರುಗಳಿಗೆ ಪೈಪೋಟಿ ನೀಡಿರುವ ಮಹಿಳಾ ಮಣಿಯರು ಅಂತಿವಾಗಿ ಗೆಲುವು ತಮ್ಮದಾಗಿಸಿಕೊಂಡು ಬೀಗಿದ್ದಾರೆ.
ನಿಪ್ಪಾಣಿ ಕ್ಷೇತ್ರದಿಂದ ಹಾಲಿ ಶಾಸಕಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ಉತ್ತಮ್ ರಾವ್ಸಾಹೇಬ್ ಪಾಟೀಲ್ ಅವರನ್ನು 7292 ಮತಗಳ ಅಂತರದಿಂದ ಸೋಲಿಸಿ ಜಯ ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು 56,016 ಮತಗಳ ಅಂತದಿಂದ ಬಿಜೆಪಿಯ ನಾಗೇಶ್ ಅಣ್ಣಪ್ಪ ಮನೋಳ್ಕರ್ ಅವರನ್ನು ಪರಾಭವಗೊಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಜಾರಕಿಹೊಳಿ ಇನ್ನಲ್ಲಿದ ಪ್ರಯತ್ನ ಮಾಡಿದರೂ ಸಹ ಮತದಾರ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಗೆಲುವು ನೀಡಿದ್ದಾನೆ.
ಎರಡು ಬಾರಿ ಪರಾಭವಗೊಂಡಿದ್ದ ದೇವದುರ್ಗದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕ್ಷೇತ್ರದಲ್ಲಿ ಜನರೊಂದಿಗೆ ಒಡನಾಟ ಮತ್ತು ಕೆಲಸಗಳನ್ನು ಮಾಡಿಕೊಂಡು ಬಂದಿದ್ದ ಕರೆಮ್ಮ ಅವರಿಗೆ ಮತದಾರರೇ ಹಣ ನೀಡಿ ಅವರ ಗೆಲುವಿಗೆ ಸಹಕಾರಿ ಆಗಿದ್ದಾರೆ. ಇಲ್ಲಿ ಬಿಜೆಪಿ ಪ್ರಭಾವಿ ಮತ್ತು ಮಾಜಿ ಶಾಸಕ ಶಿವನಗೌಡ ನಾಯಕ್ ಅವರು ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಕರೆಮ್ಮ 34,256 ಮತಗಳ ಅಂತದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಪ್ರಚಾರ ಮಾಡಿದ್ದರೂ ಮತದಾರ ಕರೆಮ್ಮ ಅವರಿಗೆ ಗೆಲುವು ನೀಡಿದ್ದಾನೆ.
ಹರಪನಹಳ್ಳಿಯಿಂದ ಪಕ್ಷೇತರ ಅಭ್ಯರ್ಥಿಯಾದ ಲತಾ ಮಲ್ಲಿಕಾರ್ಜುನ್ ಅವರು ಬಿಜೆಪಿಯ ಜಿ ಕರುಣಾಕರ ರೆಡ್ಡಿ ಅವರನ್ನು ಪರಾಭವಗೊಳಿಸದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರವಾಗಿ ಸ್ಪರ್ಧಿಸಿದ್ದ, ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರ ಪುತ್ರಿಯೂ ಆದ ಲತಾ ಮಲ್ಲಿಕಾರ್ಜುನ್ ಅವರು ಕರುಣಾಕರ ರೆಡ್ಡಿ ಅವರನ್ನು 13,845 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಶಾರದಾ ಪೂರ್ಯನಾಯ್ಕ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಕೆ. ಬಿ. ಅಶೋಕ್ ನಾಯ್ಕ್, ಕಾಂಗ್ರೆಸ್ನಿಂದ ಡಾ. ಶ್ರೀನಿವಾಸ ಕರಿಯಣ್ಣ ಅವರಿಗೆ ವಿರುದ್ಧ ಪೈಪೋಟಿ ನೀಡಿ ಜಯಗಳಿಸಿದ್ದಾರೆ.
ಕೆಜಿಎಫ್ ಮೀಸಲು ಕ್ಷೇತ್ರದಿಂದ ಹಾಲಿ ಶಾಸಕಿ ರೂಪಕಲಾ ಎಂ. ಅವರು ಮತ್ತೊಮ್ಮೆ ಜಯಗಳಿಸಿದ್ದಾರೆ. ಇವರು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಪುತ್ರಿಯೂ ಆಗಿದ್ದಾರೆ.
ಬೆಂಗಳೂರಿನ ಮಹದೇವಪುರ ಮೀಸಲು ಕ್ಷೇತ್ರದಿಂದ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಮಂಜುಳಾ ಅರವಿಂದ ಲಿಂಬಾವಳಿ ಅವರು ಅಚ್ಚರಿಯ ಜಯಗಳಿಸಿದ್ದಾರೆ. ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡದ ಬಿಜೆಪಿ ಕೊನೆ ಕ್ಷಣದಲ್ಲಿ ಅವರ ಪತ್ನಿಗೆ ಟಿಕೆಟ್ ನೀಡಿತ್ತು. ಇಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ ಎಚ್. ನಾಗೇಶ್ ಸ್ಪರ್ಧಿಸಿದ್ದರು. ಕೆಲವೇ ದಿನ ಪ್ರಚಾರ ಮಾಡಿದರೂ ಸಹ ಮಂಜುಳಾ ಜಯಗಳಿಸಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ನಯನಾ ಮೋಟಮ್ಮ ಗೆಲುವು ಪಡೆದುಕೊಂಡಿದ್ದಾರೆ. ಇಲ್ಲಿ ಮಾಜಿ ಸಚಿವೆ ಮೋಟಮ್ಮ ಅವರು ನಿರಂತರ ಗೆಲುವು ಸಾಧಿಸುತ್ತಿದ್ದರು. ಕಳೆದ ಬಾರಿ ಪರಾಭವಗೊಂಡಿದ್ದರು. ಈಗ ಅವರ ಪುತ್ರಿಗೆ ಕಾಂಗ್ರೆಸ್ ಟಿಕೆ ನೀಡಲಾಗಿತ್ತು. ನಯನಾ ಮೋಟಮ್ಮ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಲಿದ್ದಾರೆ.
ಇನ್ನು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.