ಸುದ್ದಿಮೂಲ ವಾರ್ತೆ
ಮೈಸೂರು,ಏ.17: ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಪಕ್ಷ ತೊರೆದು ಹೋಗಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾವ ಯಾವ ಕ್ಷೇತ್ರದಲ್ಲಿ ಪಕ್ಷ ಬಿಟ್ಟು ಹೋಗಿದ್ದಾರೆ, ಅಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ಸೋಮಣ್ಣ ಅಭಿವೃದ್ದಿಗೆ ಮಾದರಿ. ಇವತ್ತು ಸೋಮಣ್ಣ ಅವರು ವರುಣಾಗೆ ಬಂದಿದ್ದಾರೆ. ವರುಣಾ ಇಂದು ಸೋಮಣ್ಣಮಯವಾಗಿದೆ. ವರುಣಾ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಲಿದೆ. ಸೋಮಣ್ಣಗೆ ಚಾಮುಂಡಿ ತಾಯಿಯ ಆಶೀರ್ವಾದ ಇದೆ ಎಂದರು.
ವಿ ಸೋಮಣ್ಣ ಅಂದ್ರೆ ವಿಕ್ಟರಿ ಸೋಮಣ್ಣ. ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದುರ್ಬಲರ ಹೆಸರು ಹೇಳಿ ಕೆಲವರು ಅಧಿಕಾರ ಪಡೆದರು. ನಾಯಕರು ಬೆಳೆದರು, ದುರ್ಬಲ ವರ್ಗ ಬೆಳೆಯಲೇ ಇಲ್ಲ. ಭಾಷಣದಿಂದ ಸಾಮಾಜಿಕ ನ್ಯಾಯ ಸಿಗಲ್ಲ. ರಾಜಕೀಯ ಇಚ್ಚಾಶಕ್ತಿಯಿಂದ ಸಮಾನತೆ ಸಾಧ್ಯ ಎಂದರು.
ಅನ್ನ ಭಾಗ್ಯಕ್ಕೆ ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿ. ಅಕ್ಕಿ ಮೋದಿಯದ್ದು, ಚೀಲ ಸಿದ್ದರಾಮಯ್ಯದ್ದು. 2013ರಲ್ಲಿ ಕುಟುಂಬಕ್ಕೆ 30 ಕೆಜಿ ಇತ್ತು. ಅಕ್ಕಿಯನ್ನು 5 ಕೆಜಿಗೆ ಇಳಿಕೆ ಮಾಡಿದ್ದು ಯಾರು? ಚುನಾವಣೆ ಬಂದಾಗ 7ಕೆಜಿಗೆ ಹೆಚ್ಚಳ ಮಾಡಿದ್ರು. ಅನ್ನಭಾಗ್ಯದ ಹಣ ಕೇಂದ್ರ ಸರ್ಕಾರದ್ದು ಎಂದರು.
ಬಡವರ ಪರ ಒಂದೇ ಒಂದು ಕೆಲಸ ಮಾಡಿಲ್ಲ. ದೀನ-ದಲಿತರಿಂದ ಮತ ಹಾಕಿಸಿಕೊಂಡು ಗೆದ್ದರು. ಅನ್ನಭಾಗ್ಯದ ಅಕ್ಕಿ ಬ್ಲಾಕ್ ಮಾರ್ಕೆಟ್ ಗೆ ಹೋಗುತ್ತಿದೆ. ಸಿದ್ದು ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು. BDA ಹೌಸಿಂಗ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ಆಯ್ತು. ಈಗ ಬಿಜೆಪಿ ವಿರುದ್ದ 40% ಆರೋಪ ಮಾಡ್ತಿದ್ದಾರೆ. ಚುನಾವಣೆ ಗಿಮಿಕ್ ಗಾಗಿ 40% ಆರೋಪ ಮಾಡಿದರು. ಆದರೆ ಯಾವುದೇ ಒಂದು ದೂರು ದಾಖಲಿಸಿಲ್ಲ. ಖಡಕ್ ಆಗಿದ್ದ ಲೋಕಾಯುಕ್ತವನ್ನು ಏಕೆ ತೆಗೆದುಹಾಕಿದ್ರು ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದರು.
ಸೋಮಣ್ಣ ಗೋವಿಂದರಾಜನಗರ ಮಾದರಿ ಮಾಡಿದ್ದಾರೆ. ವರುಣಾ ಕೂಡಾ ಗೋವಿಂದರಾಜನಗರದಂತೆ ಬೆಳೆಯಬೇಕು. ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲಿ ಭ್ರಷ್ಟಾಚಾರ ಮಾಡಿದೆ. ಈಗ ಕಾಂಗ್ರೆಸ್ಸಿಗರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. 50 ವರ್ಷದಿಂದ ಬಡವರು ಬಡವರಾಗಿ ಉಳಿಯುತ್ತಿರಲಿಲ್ಲ. ಸಮಸ್ಯೆ ಬಗ್ಗೆ ಭಾಷಣ ಮಾಡಿದ್ರೆ ಪರಿಹಾರ ಮಾಡೋದ್ಯಾರು? ಎಲ್ಲಾ ಭಾಗ್ಯಗಳನ್ನ ಘೋಷಣೆ ಮಾಡಿದ್ರಿ? ಗ್ಯಾರಂಟಿ ಕೊಟ್ರಿ? ಅನ್ನಭಾಗ್ಯ ಅಂತೀರಿ. ಬಡವರ ಮನೆ ಹೋಗ್ತಿದ್ಯಾ? ನೀವು ಬರೋಕು ಮುನ್ನ ಅಕ್ಕಿ ಕೊಡ್ತಿರಲಿಲ್ವೆ? ಎಂದರು.
ನೀವೆಲ್ಲ ಸೇರಿರುವುದನ್ನು ನೋಡಿದರೆ ನೂರಕ್ಕೆ ನೂರರಷ್ಟು ಸೋಮಣ್ಣರ ಗೆಲುವು ಸಾಧಿಸುತ್ತಾರೆ. ನಮ್ಮ ಸರ್ಕಾರದ ಮೊದಲ ಕ್ಯಾಬಿನೆಟ್ ನಲ್ಲಿ ವರುಣಾವನ್ನು ತಾಲ್ಲೂಕು ಎಂದು ಘೋಷಣೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ವಿ. ಶ್ರೀನಿವಾಸ ಪ್ರಸಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.