ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 10 ರದು ಒಂದೇ ಹಂತದಲ್ಲಿ ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ. ಈ ಮಧ್ಯೆ ಮತದಾನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತಿಗೆ ಬಿಜೆಪಿ ಮುಂದಾಗಿದೆ. ಈ ನಡುವೆ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿಧಾನಸಭೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅವರಿಗೆ ಟಿಕೆಟ್ ನೀಡದಿರಲು ಪಕ್ಷವು ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಹೊಸ ಮುಖವನ್ನು ಹುಡುಕುತ್ತಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಈಶ್ವರಪ್ಪ ಕುರುಬ ಸಮುದಾಯದ ಫೇಸ್ ಅನ್ನುವುದರ ಜೊತೆಗೆ ಕಟ್ಟಾ ಹಿಂದುತ್ವವಾದಿಯೂ ಹೌದು. ಇದೇ ಕಾರಣದಿಂದ ಈಶ್ವರಪ್ಪ ನೀಡುವ ಹೇಳಿಕೆ ಭಾರೀ ಸದ್ದು ಮಾಡುತ್ತದೆ. ಇವ್ರು ನೀಡುವ ಹೇಳಿಕೆಗಳು ವಿವಾದವನ್ನು ಉಂಟು ಮಾಡಿದ್ದೂ ಉಂಟು.
ಮಗನ ಪರ ಲಾಬಿ ಮಾಡುತ್ತಿರುವ ಈಶ್ವರಪ್ಪ :
ಈಶ್ವರಪ್ಪ ಮತ್ತು ಯಡಿಯೂರಪ್ಪ ಸಮಕಾಲೀನರು, ಅವರಿಗೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಲು ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಅವಕಾಶ ನೀಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಪಕ್ಷದಲ್ಲಿ ಹೊರಹೊಮ್ಮಿವೆ ಎನ್ನಲಾಗಿದೆ. ಈ ಮಧ್ಯೆ, ಈಶ್ವರಪ್ಪ ಈಗಾಗಲೇ ತಮ್ಮ ಪುತ್ರ ಕಾಂತೇಶ್ಗಾಗಿ ಟಿಕೆಟ್ಗಾಗಿ ಲಾಬಿ ಆರಂಭಿಸಿದ್ದಾರೆ.
ಈಶ್ವರಪ್ಪ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ರಾಜಕೀಯ ದಿಗ್ಗಜ ಕೆ.ಎಚ್. ಶ್ರೀನಿವಾಸ್ ಅವರನ್ನು ಸೋಲಿಸುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ರಾಜ್ಯದ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಗುತ್ತಿಗೆದಾರ ಹಾಗೂ ಬಿಜೆಪಿ ಮುಖಂಡ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈಶ್ವರಪ್ಪ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ಸಂತೋಷ್ ಡೆತ್ ನೋಟ್ ನಲ್ಲಿ ಈಶ್ವರಪ್ಪ ಹೆಸರು ಪ್ರಸ್ತಾಪಿಸಿದ್ದ ಕಾರಣ, ಬೊಮ್ಮಾಯಿ ಸಂಪುಟದಿಂದ ಹೊರ ಬರಬೇಕಾಯಿತು. ಆದರೆ ನಂತರ ನಡೆದ ತನಿಖೆಯಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಕ್ಲೀನ್ ಚಿಟ್ ಸಿಕ್ಕಿದರೂ ಈಶ್ವರಪ್ಪ ಸಚಿವ ಸಂಪುಟಕ್ಕೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ಈಶ್ವರಪ್ಪ ಸೇವೆಯನ್ನು ಸಂಘಟನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸ್ಥಳೀಯ ಮುಖಂಡ ಆಯನೂರು ಮಂಜುನಾಥ್ ಶಿವಮೊಗ್ಗದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೂಲಗಳ ಪ್ರಕಾರ ಸಮಾಜ ಸೇವಕ, ಚಾಣಾಕ್ಷ ಹಾಗೂ ಸಂಘಪರಿವಾರಕ್ಕೆ ಆಪ್ತರಾಗಿರುವ ಧನಂಜಯ್ ಅವರಿಗೆ ಟಿಕೆಟ್ ಸಿಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.