ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.1: ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವುದಿಲ್ಲ ಎಂದ ಮೇಲೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ತಮ್ಮ ನೂತನ ಕಚೇರಿಗೆ ಪೂಜೆ ನೆರವೇರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಮ್ಮ ಪ್ರಣಾಳಿಕೆಯಲ್ಲಿ ಸರಿಯಾಗಿ ನೋಡಬೇಕು. ಯಾರು ಸಮಾಜದ ಶಾಂತಿಯನ್ನು ಕದಡುತ್ತಾರೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದೇವೆ ಅಷ್ಟೇ ಎಂದರು. ಹೇಳಿದ್ದಾರೆ.
ಭಜರಂಗದಳ ನಿಷೇಧ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನೇಕ ಜನ ಟೀಕೆ, ಟಿಪ್ಪಣೆಗಳನ್ನು ಮಾಡಿರಬಹುದು. ಆದರೆ, ಸಮಾಜದಲ್ಲಿ ಶಾಂತಿ ಕದಡುವುದಿಲ್ಲ ಎಂದ ಮೇಲೆ ಅವರಿಗೆ ಯಾಕೆ ಭಯ. ಯಾರು ಕಾನೂನು ಕೈಗೆತ್ತಿಕೊಳ್ಳುತ್ತಾರೋ ಅವರನ್ನು ನಿಷೇಧಿಸುತ್ತೇವೆ. ಈ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ನಾವು ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತೇವೆ. ದೇವರನ್ನು ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ. ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂತದ್ದು ಎಂದರು.
ರಾಜ್ಯದ ಕಾನೂನು ವ್ಯವಸ್ಥೆಯನ್ನು ಮುಖವಾಣಿಯಲ್ಲಿರುವ ಗೃಹ ಖಾತೆ ಬಹಳ ಪ್ರಾಮುಖ್ಯ. ಇಲ್ಲಿ ಏನೇ ವಿದ್ಯಮಾನಗಳು ನಡೆದರೂ ಜನತೆಗೆ ಮುಟ್ಟುತ್ತದೆ. ಇಲ್ಲಿಂದ ಒಳ್ಳೆಯ ಕೆಲಸಗಳಾಗಲಿ ಎಂದ ಅವರು, ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಏನೇ ಹೇಳಿದರೂ ಅಪ್ರಸ್ತುತವಾಗುತ್ತದೆ ಎಂದು ಹೇಳಿದರು.