ಸುದ್ದಿಮೂಲ ವಾರ್ತೆ
ಮಡಿಕೇರಿ, ಅ.18: ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ತೀರ್ಥೋದ್ಭವದ ಕ್ಷಣಕ್ಕೆ ಸಾವಿರಾರು ಜನ ಸಾಕ್ಷಿಯಾದರು.
ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಹಿನ್ನೆಲೆ ಶ್ರೀ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಮಂಗಳವಾರ ಮಧ್ಯರಾತ್ರಿ 1. 27 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವವಾಗಿದೆ. ಸಾವಿರಾರು ಜನರು ದರ್ಶನ ಪಡದು, ಪೂಜೆ ಸಲ್ಲಿಸಿ, ಘೋಷಣೆಗಳನ್ನು ಕೂಗಿ ಪುನೀತರಾದರು.
ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ನೀರಿನ ಬುಗ್ಗೆಯ ರೀತಿ ಉಕ್ಕುತ್ತಾ ಭಕ್ತರಿಗೆ ದರ್ಶನ ಕರುಣಿಸಿದಳು. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಮತ್ತು ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿತು.
ಮಂತ್ರಘೋಷಗಳ ನಡುವೆ ಕಾವೇರಿ ತೀರ್ಥೋದ್ಭವ ಆಗುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜೈ ಜೈ ಕಾವೇರಿ ಮಾತೆ ಎಂದು ಉದ್ಘೋಷಗಳನ್ನು ಮೊಳಗಿಸಿದರು. ಬ್ರಹ್ಮಕುಂಡಿಕೆಯಿಂದ ಕಾವೇರಿ ಮಾತೆ ಆವಿರ್ಭವಿಸುತ್ತಿದ್ದಂತೆ ನೆರೆದಿದ್ದವರು ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಉಕ್ಕಿಬಂದ ತೀರ್ಥವನ್ನು ಅರ್ಚಕರು ತುಂಬಿಕೊಂಡು ಸುತ್ತಲೂ ನೆರೆದಿದ್ದ ಭಕ್ತಗಣದತ್ತ ಪ್ರೋಕ್ಷಣೆ ಮಾಡಿದರು.
ಈ ವೇಳೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕರಾದ ಮಂಥರ್ ಗೌಡ, ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣ ಅವರೂ ಸಹ ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಸಚಿವ ಎನ್ ಎಸ್ ಬೋಸರಾಜ್ ಅವರು, ಕಾವೇರಿ ಮಾತೆ ಕೊಡಗು ಕರ್ನಾಟಕಕ್ಕೆ ಅಷ್ಟೇ ಅಲ್ಲ. ತಮಿಳುನಾಡಿಗೂ ಅನ್ನ ನೀರು ಒದಗಿಸುತ್ತಿದ್ದಾಳೆ. ಈ ಬಾರಿ ರಾಜ್ಯಕ್ಕೆ ಸಮೃದ್ಧಿ ನೀಡಲೆಂದು ಪ್ರಾರ್ಥಿಸಲಾಗಿದೆ ಎಂದು ಹೇಳಿದರು.