ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.16: ಜಿ-20 ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಸಮೂಹ ಮತ್ತು ಡಿಜಿಟಲ್ ಆರ್ಥಿಕ ಸಚಿವರ ಮೂರು ದಿನಗಳ ಸಭೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಲ್ಕೇಶ್ಕುಮಾರ್ ಶರ್ಮಾ, ಸಭೆಗೆ ಚಾಲನೆ ನೀಡಿದರು. ಇದೇ 19 ರವರೆಗೆ ಸಭೆ ನಡೆಯಲಿದ್ದು, ಈ ಸಭೆಗಳಿಗೆ ಸಮಾನಾಂತರವಾಗಿ ನಾಳೆ ಮತ್ತು ನಾಡಿದ್ದು ಡಿಜಿಟಲ್ ಆವಿಷ್ಕಾರ ಮೈತ್ರಿ ಶೃಂಗಸಭೆ ಕೂಡ ನಡೆಯಲಿದೆ.
ಉದ್ಘಾಟನಾ ಭಾಷಣ ಮಾಡಿದ ಅಲ್ಕೇಶ್ಕುಮಾರ್ ಶರ್ಮಾ, ಡಿಜಿಟಲ್ ಆರ್ಥಿಕತೆ, ಸೈಬರ್ ಸುರಕ್ಷತೆ, ಡಿಜಿಟಲ್ ಕೌಶಲ್ಯ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಆರ್ಥಿಕತೆಗೆ ಬೆಂಬಲ, ಡಿಜಿಟಲ್ ವಹಿವಾಟು ಸೇರಿದಂತೆ ವಿವಿಧ ವಲಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದರು.
ಡಿಜಿಟಲ್ ವಲಯದಲ್ಲಿನ ವಿವಿಧ ವಿಚಾರಗಳ ಕುರಿತು ಇರಬಹುದಾದ ಭಿನ್ನಾಭಿಪ್ರಾಯಗಳನ್ನು ಈ ಸಭೆಯಲ್ಲಿ ಬಗೆಹರಿಸಿ ಡಿಜಿಟಲ್ ಆರ್ಥಿಕ ಸಚಿವರ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಡಿಜಿಟಲ್ ಆರ್ಥಿಕತೆಗಳ ಸವಾಲುಗಳು ಮತ್ತು ಅವಕಾಶಗಳ ಕುರಿತು ಒಪ್ಪಂದ ಮಾಡಿಕೊಳ್ಳುವ ಸಂಬಂಧದ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ರೈಲ್ವೆ, ಸಂವಹನ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.