ಸುದ್ದಿಮೂಲ ವಾರ್ತೆ,
ಮೈಸೂರು, ಮೇ 22: ಭಾರಿ ಸಿಡಿಲು, ಮಳೆ ಅಬ್ಬರಕ್ಕೆ ಜಿಲ್ಲೆಯಲ್ಲಿ ಮೂವರು ರೈತರು ಮೃತಪಟ್ಟು, ಅಪಾರ ಪ್ರಮಾಣ ಬೆಳೆ ಮತ್ತು ರಸ್ತೆಗಳಿಗೆ ಹಾನಿಯಾಗಿದೆ.
ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಿಡಿಲು ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಸಿಡಿಲು ಬಡಿದ ಇಬ್ಬರು ಹಾಗೂ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಮಂಟಿಕೊಪ್ಪಲು ಗ್ರಾಮದ ಹರೀಶ್ (41) ಎಂಬುವರು ಜಮೀನಿನಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟಿದ್ದು, ಅವರು, ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಇದೇ ತಾಲ್ಲೂಕಿನ ಮರೂರು, ಗಾವಡಗೆರೆ, ಮರೂರು ಕಾವಲ್, ಕಟ್ಟೆಮಳಲವಾಡಿ ಭಾಗದಲ್ಲಿ ಜೋರು ಗಾಳಿ, ಮಳೆಯಿಂದಾಗಿ ಮರ ನೆಲಕ್ಕುರುಳಿ 20 ವಿದ್ಯುತ್ ಕಂಬಗಳು ಉರುಳಿವೆ.
ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿ ಗ್ರಾಮದ ಲೋಕೇಶ್ (55) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಂಜೆ ಮೃತಪಟ್ಟಿದ್ದಾರೆ.
ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಮೀಪದ ಕೆ.ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಮೃತಪಟ್ಟರು. ಹರೀಶ್(42) ಮತ್ತು ಸಂಜಯ್ (19) ಗಾಯಗೊಂಡಿದ್ದಾರೆ. ಜೋರು ಮಳೆ, ಗಾಳಿಯಿಂದಾಗಿ ತಂತಿ ತುಂಡಾಗಿ ಬಿದ್ದಿತ್ತು. ಉಳುಮೆ ಮಾಡುವಾಗ ತಂತಿ ತುಳಿದಿದ್ದಾರೆ ಎಂದು ತಿಳಿದಿದೆ.
ಮೈಸೂರಿನ ಜೆಎಲ್ಬಿ ರಸ್ತೆಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಎದುರು ಜೋರು ಗಾಳಿಮಳೆಯಿಂದ
ಮರವೊಂದು ಬಿದ್ದಿದೆ.