ಮೈಸೂರು,ಜೂ.17:ದಿನನಿತ್ಯ ಶಾಲೆಗೆ ಹೋಗುವಾಗ ಮತ್ತು ಬರುವಾಗ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಇದರಿಂದ ಬೇಸತ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಂಚಹಳ್ಳಿಹುಂಡಿ ಗ್ರಾಮದಲ್ಲಿ ನಡೆದಿದೆ.
ಬಂಚಹಳ್ಳಿ ಹುಂಡಿ ಗ್ರಾಮದ ರಮೇಶ್ ಎಂಬುವರ ಪುತ್ರಿ ಚಂದನ (15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೃತ ವಿದ್ಯಾರ್ಥಿನಿ ಚಂದನ ತಾಂಡವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಅದೇ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಶರತ್ ಎಂಬ ಯುವಕ ಚಂದನಾಳನ್ನು ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸಿಕೊಂಡು ಚುಡಾಯಿಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಚಂದನಾ ತನ್ನ ತಂದೆ ರಮೇಶ್ ರವರಿಗೆ ವಿಷಯ ತಿಳಿಸಿದ್ದು, ರಮೇಶ್ ಆರೋಪಿ ವೆಂಕಟೇಶನಿಗೆ ಬುದ್ದಿವಾದ ಹೇಳಿದ್ದರು. ನಂತರವೂ ಸಹ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ಕಾರಣ ರಮೇಶ್ ತನ್ನ ಮಗಳನ್ನು ಶಾಲೆಯಿಂದ ಬಿಡಿಸಿ ಮನೆಯಲ್ಲಿಯೇ ಉಳಿಸಿಕೊಂಡಿದ್ದರು.
ಇದರಿಂದ ಮನನೊಂದ ವಿದ್ಯಾರ್ಥಿನಿ ಚಂದನಾ ಶುಕ್ರವಾರ ಬೆಳಿಗ್ಗೆ ಮನೆಯ ತೀರಿಗೆ ತನ್ನ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮೃತ ಚಂದನಾಳ ತಂದೆ ರಮೇಶ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆತ್ಮಹತ್ಯೆ ತಡೆಗಟ್ಟಲು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ SAHAI ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಸಂಖ್ಯೆ: 080 – 25497777