ಮಾ.31: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಏ. 1 ರಿಂದ ವೆಂಕಟೇಶ್ವರನ ಬೆಟ್ಟಕ್ಕೆ ಚಾರಣ ಮಾಡುವ ಭಕ್ತರಿಗೆ ದಿವ್ಯ ದರ್ಶನ ಟೋಕನ್ಗಳ ವಿತರಣೆಯನ್ನು ಪುನರಾರಂಭಿಸಲು ನಿರ್ಧರಿಸಿದೆ. ಒಂದು ವಾರದವರೆಗೆ ಪ್ರಾಯೋಗಿಕ ಆಧಾರದ ಮೇಲೆ ಟೋಕನ್ಗಳನ್ನು ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಭಕ್ತರಿಗೆ ದಿವ್ಯ ದರ್ಶನ ಟೋಕನ್ಗಳ ವಿತರಣೆಯನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ ಹಾಗೂ ಬೇಸಿಗೆಯಲ್ಲಿ ತಿರುಮಲಕ್ಕೆ ಬರುವ ಭಕ್ತದಿಗಳಿಗೆ ಅನೇಕ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾರೆಡ್ಡಿ ಅವರು ತಿಳಿಸಿದ್ದಾರೆ. ಸಾಮಾನ್ಯವಾಗಿ, ಏಪ್ರಿಲ್ 15ರಿಂದ ಜುಲೈ 15ರ ನಡುವೆ ಯಾತ್ರಿಕರ ಸಂಖ್ಯೆ ಗರಿಷ್ಠವಾಗಿರುತ್ತದೆ. ವಿಐಪಿ ಬ್ರೇಕ್ ದರ್ಶನ ಮತ್ತು ಎಸ್ಇಡಿ (ತಲಾ ₹ 300 ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳು) ಟಿಕೆಟ್ಗಳ ವಿತರಣೆಯನ್ನು ಕಡಿಮೆ ಮಾಡಲು ಟಿಟಿಡಿ ನಿರ್ಧರಿಸಿದೆ. ಶ್ರೀವಾಣಿ, ಪ್ರವಾಸೋದ್ಯಮ ಮತ್ತು ವರ್ಚುವಲ್ ಸೇವಾ ಕೋಟಾಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದೆಲ್ಲವೂ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಕ್ರಮದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಅದಲ್ಲದೆ ಸಾಮಾನ್ಯ ಭಕ್ತರಿಗೆ ತ್ವರಿತ ದರ್ಶನಕ್ಕೆ ಅನುಕೂಲವಾಗುವಂತೆ ದೇವಾಲಯದ ಆಡಳಿತದೊಂದಿಗೆ ಸಹಕರಿಸುವಂತೆ ಟಿಟಿಡಿ ಅಧ್ಯಕ್ಷರು ವಿಐಪಿಗಳಿಗೆ ಮನವಿ ಮಾಡಿದ್ದಾರೆ.