ಶಿಡ್ಲಘಟ್ಟ, ಸೆ.2: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರ ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಸುಮಾರು ತಿಂಗಳ ನಂತರ ಸುರಿದ ಮಳೆಯಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತೊಂದರೆ ಇನ್ನೂ ಬರಗಾಲದ ಭೀತಿಯಲ್ಲಿದ್ದ ಜನರಿಗೆ ಸಮಾಧಾನ ತಂದಿದೆ ಇನ್ನೂ ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಅಮಾನಿ ಕೆರೆ ಬತ್ತಿ ಹೋಗುವ ಹಂತಕ್ಕೆ ತಲುಪಿತು ಇಂದು ಸುರಿದ ಮಳೆಯಿಂದ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಶೇಖರಣೆಯಾಗಿದೆ.
ನಗರದಲ್ಲಿ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶಗಳು ಎಂದಿನಂತೆ ಜಲಾವೃತಗೊಂಡು ಮಳೆನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ರಸ್ತೆಗೆ ಹರಿದಿದ್ದು ದೃಶ್ಯ ಗಳು ಸರ್ವೇ ಸಾಮಾನ್ಯವಾಗಿ ಕಂಡುಬಂದಿತ್ತು.
ಮಳೆಯ ಆರ್ಭಟಕ್ಕೆ ನಗರದ ಸರ್ಕಾರಿ ಪ್ರೌಢಶಾಲೆ ಆವರಣ ಮಿನಿ ದ್ವೀಪವಾಗಿ ಪರಿವರ್ತನೆಗೊಂಡಿತು ಮಳೆಯ ನೀರು ಹರಿಯಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಇಡೀ ಸರ್ಕಾರಿ ಪ್ರೌಢ ಶಾಲಾ ಆವರಣ ಜಲಾವೃತಗೊಂಡಿತು.
ಮಳೆಯ ಪ್ರಭಾವದಿಂದ ನಗರದ ಕಾರ್ಮಿಕ ನಗರಗಳಸ್ಥಿತಿ ಶೋಚನೀಯವಾಗಿತ್ತು ಮಳೆಯ ನೀರು ಚರಂಡಿಯಲ್ಲಿ ಸಮರ್ಪಕವಾಗಿ ಹರಿಯದೆ ಕಲುಷಿತ ನೀರು ರಸ್ತೆಯಲ್ಲಿ ಹರಿದು ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತ ಗೊಂಡರೆ ಮತ್ತೊಂದೆಡೆ ನಗರದ ರೈಲ್ವೆ ಕೆಳ ಸೇತುವೆಯಲ್ಲಿ ಬಳಿ ಮಳೆಯ ನೀರು ನಿಂತು ವಾಹನ ಸವಾರರು ಸಂಚರಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ತಾಲೂಕ ದಂಡಾಧಿಕಾರಿ ಬಿ ಏನ್ ಸ್ವಾಮಿ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ಮುರಳಿ ಭೇಟಿ ನೀಡಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು.
ಒಟ್ಟಾರೆ ಶಿಡ್ಲಘಟ್ಟ ನಗರದಲ್ಲಿ ಸುರಿದ ಮಳೆಯಿಂದಾಗಿ ಬಿಸಿಲಿನ ತಾಪದಿಂದ ಒಂದು ಕಡೆ ತಂಪೆರೆದರೆ ರೈತರಿಗೆ ಸ್ವಲ್ಪ ಸಮಾಧಾನ ತಂದಿದೆ.