ಸುದ್ದಿಮೂಲ ವಾರ್ತೆ
ಬೆಂಗಳೂರು, ನ.6: ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯು ಗ್ರಾಮೀಣ ನಿರುದ್ಯೋಗಿ ಯುವ ಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ದೊರಕಿಸಿ ಕೊಡುವ ಮಹತ್ವದ ಯೋಜನೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ತಿಳಿಸಿದರು.
ಇಂದು ಹೋಟೆಲ್ ರಾಡಿಸನ್ ಬ್ಲೂ ಏಟ್ರಿಯಾದಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಸಿಎಕ್ಸ್ಓ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಸಚಿವರು ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯು 2014 ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಗ್ರಾಮೀಣ ನಿರುದ್ಯೋಗಿ ಯುವ ಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ದೊರಕಿಸಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದರು.
ಯುವ ಪೀಳಿಗೆ ರಾಷ್ಟ್ರದ ಬಹುದೊಡ್ಡ ಆಸ್ತಿ. ಕೈಗಾರಿಕೆಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಿ ಯುವ ಪೀಳಿಗೆಗೆ ಮತ್ತು ದೇಶದ ಅಭಿವೃದ್ಧಿಗೆ ದಾರಿದೀಪವಾಗಬೇಕು. ಉದ್ಯಮ ಮತ್ತು ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಹೆಚ್ಚು ಹೆಚ್ಚು ಯುವಜನರು ಕೌಶಲ್ಯವನ್ನು ತಂತ್ರಜ್ಞಾನಪೂರಿತವಾಗಿ ಮೈಗೂಡಿಸಿಕೊಳ್ಳುತ್ತಿದ್ದು, ತಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಪೂರಕವಾಗಿದೆ ಎಂದರು.
ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಈ ಮಹತ್ವಪೂರ್ಣ ಯೋಜನೆಯಿಂದ ಸರಿಸುಮಾರು 54,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸೃಷ್ಟಿಸಿ ರಾಷ್ಟ್ರದ ಮಾನವ ಸಂಪನ್ಮೂಲ ಸರಪಳಿಗೆ ಕೊಡುಗೆ ನೀಡಿದೆ.
ರಾಜ್ಯವು ಶ್ರೀಮಂತ ಸಂಸ್ಕೃತಿ ಹೊಂದಿದ್ದು, ಆರ್ಥಿಕತೆಯಲ್ಲಿ ಪ್ರಗತಿಯನ್ನು ಪಡೆದಿದೆ. ಅಲ್ಲದೆ ಹೊಸ ತಂತ್ರಜ್ಞಾನ, ರೊಬೊಟಿಕ್ಸ್, ಕೃತಕ ಬುದ್ದಿಮತ್ತೆ, ಹೊಸ ಆವಿಷ್ಕಾರಗಳನ್ನು ಹೊಂದಿದೆ. ರಾಜ್ಯದಲ್ಲಿ ಕೈಗಾರಿಕೆ ಮತ್ತು ಕಂಪನಿಗಳಿಗೆ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಸಹಕಾರ ಬೆಂಬಲವನ್ನು ನೀಡುವುದಲ್ಲದೆ ಉದ್ಯೋಗಕ್ಕೆ ಅವಕಾಶವನ್ನು ಕಲ್ಪಿಸಿದ್ದು, ಉದ್ಯೋಗವನ್ನು ಸೃಷ್ಠಿಸಲು ಸಹ ಸಾಧ್ಯವಾಗುತ್ತದೆ. ದೇಶದ ಆರ್ಥಿಕತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ಪಿ.ಐ ರವರು ಮಾತನಾಡಿ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಕಾರ್ಯಕ್ರಮ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಯೋಜನೆಯು 2014 ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಈವರೆಗೆ 28000 ಅಭ್ಯರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. ಈ ಯೋಜನೆಯಲ್ಲಿ 78 ಯೋಜನಾ ಅನುಷ್ಟಾನ ಸಂಸ್ಥೆಗಳಿದ್ದು, ಅದರಲ್ಲಿ ಮುಖ್ಯವಾಗಿ ಅಫೆರೆಲ್, ರಿಟೈಲ್ ಸೇಲ್ಸ್ ಅಸೋಸಿಯೇಷನ್, ಏವಿಯೇಷನ್, ಫ್ರಂಟ್ ಆಫೀಸ್ ಅಸಿಸ್ಟೆಂಟ್ ಇತ್ಯಾದಿಗಳಲ್ಲಿ ತರಬೇತಿ ಪಡೆದವರು ಸುಮಾರು ರೂ. 58000-/ ವರೆಗೆ ಮಾಸಿಕ ಸಂಬಳ ಪಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಾಯಕ ಆಯುಕ್ತರು-ಗ್ರಾಮೀಣ(ಕೌಶಲ್ಯ) ಆಯುಷ್ ಪುನಿಯ, ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 30 ಕಂಪನಿಗಳ ಮುಖ್ಯಸ್ಥರು 7 ಸೆಕ್ಟರ್ ಸ್ಕಿಲ್ ಕೌನ್ಸಿಲ್ ಪ್ರತಿನಿಧಿಗಳು, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಯೋಜನಾ ಅನುಷ್ಟಾನ ಸಂಸ್ಥೆಗಳು ಹಾಗೂ ಯೋಜನೆಯಲ್ಲಿ ತರಬೇತಿ ಪಡೆದು ಉದ್ಯೋಗ ನಿರತರಾಗಿರುವ ಫಲಾನುಭವಿಗಳು ಭಾಗವಹಿಸಿದ್ದರು.